ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರಕ್ಕೆ ಸ್ಪಷ್ಟ ಬಹುಮತ ಇದೆಯೆಂದು ಹಿಂದಿ ಹೇರಿಕೆ ರಾಜಕೀಯ ಮಾಡಿದರೆ ಭಾಷಾ ದಳ್ಳುರಿಯಲ್ಲಿ ಬೇಯುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಭಾರತ ಎಂದರೆ ಹಿಂದು, ಹಿಂದಿ ಅಷ್ಟೇ ಅಲ್ಲ. ಭಾರತ ನಮ್ಮೆಲ್ಲರದ್ದು. ಸ್ಥಳೀಯ ಬಾಷೆಗಳ ಉದ್ಧಾರ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತಾ ಬರುತ್ತಿದೆ. ಆದರೆ ವಾಮಮಾರ್ಗದಲ್ಲಿ ಇಡೀ ದೇಶದ ಮೇಲೆ ಹಿಂದಿ ಹೇರಿಕೆ ಮಾಡುವುದು ಕೇಂದ್ರ ಸರ್ಕಾರದ ದುರುದ್ಧೇಶ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದ ಸಮಿತಿ ಹಿಂದಿ ಹೇರಿಗೆ ಬಗ್ಗೆ ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ವರದಿ ಆಘಾತಕಾರಿ. ಇದು ಇಡೀ ಒಕ್ಕೂಟ ವ್ಯವಸ್ಥೆಯ ವಿನಾಶಕ್ಕೆ ದಾರಿಯಾಗಲಿ ಎಂದು ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎನ್ನುವುದರ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಕನ್ನಡದ ಮೇಲೆ ಕೇಂದ್ರ ಸರ್ಕಾರ ಈವರೆಗೆ ನಡೆಸಿದ ದಬ್ಬಾಳಿಕೆಯೇ ಹಿಂದಿ ಹೇರಿಕೆಗೆ ಸಾಕ್ಷಿ ಎಂದಿದ್ದಾರೆ. ಸರ್ಕಾರ ತನ್ನ ಹಳೆಯ ಚಾಳಿ ಮುಂದುವರಿಸಿದೆ. ಇಡೀ ಭಾರತವನ್ನು ತನ್ನ ಹಿಡೆನ್ ಅಜೆಂಡಾ ಮೂಲಕ ಹಿಡಿದಿಟ್ಟುಕೊಳ್ಳುವ ಕಪಟ ಪ್ರಯತ್ನ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.