ನ್ಯೂಸ್

ಪಕ್ಕದ ಮನೆಯವರಿಂದಲೇ ಕೊಲೆ?; ಇಂಟೆಲಿಜೆನ್ಸ್ ಬ್ಯೂರೋ ನಿವೃತ್ತ ಅಧಿಕಾರಿ ಸಾವಿನ ಕುರಿತು ಮಹತ್ವದ ಸುಳಿವು

ಮೈಸೂರು: ಕೇಂದ್ರ ಇಂಟೆಲಿಜೆನ್ಸ್ ಬ್ಯೂರೋ ನಿವೃತ್ತ ಅಧಿಕಾರಿ ಆರ್.ಎನ್​. ಕುಲಕರ್ಣಿ ಅವರ ಅನುಮಾನಾಸ್ಪದ ಸಾವಿನ ಕುರಿತು ಮಹತ್ವದ ಸುಳಿವೊಂದು ಸಿಕ್ಕಿದೆ. ಮಾತ್ರವಲ್ಲ, ಪಕ್ಕದ ಮನೆಯವರಿಂದಲೇ ಕೊಲೆ ಆಗಿದೆ ಎಂಬ ಶಂಕೆಯ ಮೇರೆಗೆ ಅವರ ವಿರುದ್ಧ ದೂರು ಕೂಡ ನೀಡಲಾಗಿದೆ.

ಮೈಸೂರಿನ ಮಾನಸಗಂಗೋತ್ರಿ ಕ್ಯಾಂಪಸ್​​ನಲ್ಲಿ ಶುಕ್ರವಾರ ಸಂಜೆ ಕಂಪ್ಯೂಟರ್ ಸೈನ್ಸ್ ವಿಭಾಗದ ಪಕ್ಕದ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಆರ್.ಎನ್. ಕುಲಕರ್ಣಿ ಅವರಿಗೆ ನಂಬರ್ ಪ್ಲೇಟ್​ ಇರದ ಕಾರೊಂದು ಡಿಕ್ಕಿ ಹೊಡೆದುಕೊಂಡು ಹೋಗಿದೆ. ಪರಿಣಾಮವಾಗಿ ಅವರು ಸಾವಿಗೀಡಾಗಿದ್ದರು. ಇದು ಕೊಲೆಯೋ, ಅಪಘಾತವೋ ಎಂಬ ಅನುಮಾನ ಉಂಟಾಗಿದ್ದು, ಇದೀಗ ಕೊಲೆಯೇ ಎಂಬ ಆರೋಪವೊಂದು ಕೇಳಿಬಂದಿದೆ.

ಟಿ.ಕೆ. ಲೇಔಟ್​ನಲ್ಲಿ ವಾಸವಾಗಿದ್ದ ಕುಲಕರ್ಣಿ ಅವರ ನಿವಾಸಕ್ಕೆ ಹೊಂದಿಕೊಂಡಂತೆ ಮಾದಪ್ಪ ಎಂಬವರು ಮನೆ ನಿರ್ಮಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಕುಲಕರ್ಣಿ ಪಕ್ಕದ ಮನೆಯವರ ವಿರುದ್ಧ ದೂರು ನೀಡಿದ್ದರು. ನ್ಯಾಯಾಲಯದಲ್ಲೂ ಕೇಸ್ ದಾಖಲಿಸಿ ಮನೆ ನಿರ್ಮಿಸದಂತೆ ತಡೆಯಾಜ್ಞೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಗಲಾಟೆಯಾಗಿದ್ದು, ಬಳಿಕ ಮಾದಪ್ಪ ಮತ್ತಾತನ ಮಕ್ಕಳು ಕೊಲೆ ಬೆದರಿಕೆ ಹಾಕಿದ್ದರು. ಹೀಗಾಗಿ ಅವರೇ ಕೊಲೆ ಮಾಡಿಸಿರಬಹುದು ಎಂಬ ಶಂಕೆಯನ್ನು ಕುಲಕರ್ಣಿ ಅವರ ಅಳಿಯ, ಅಮೆರಿಕ ನಿವಾಸಿ ಸಂಜಯ್ ಅಂಗಡಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.