ನ್ಯೂಸ್

ಸಿಎಂ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್​ನ​ ಪ್ರಮುಖ ಘೋಷಣೆಗಳಿವು | Karnataka Budget 2025

Karnataka Budget: ಇಂದು (ಮಾ.07) ಬಹುನಿರೀಕ್ಷಿತ ರಾಜ್ಯ ಬಜೆಟ್​ (2025-26) ಆಯವ್ಯಯವನ್ನು ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜಕೀಯ ಇತಿಹಾಸದಲ್ಲಿ 16ನೇ ಬಾರಿ ಬಜೆಟ್ ಮಂಡಿಸುವ ಮೂಲಕ ದಾಖಲೆಯನ್ನು ಬರೆದಿದ್ದಾರೆ. 4.08 ಲಕ್ಷ ಕೋಟಿ ರೂ. ಬಜೆಟ್​ ಗಾತ್ರದಲ್ಲಿ ಬಜೆಟ್​ ಮಂಡಿಸಿದ ಸಿಎಂ, ರಾಜ್ಯದ ಹಲವು ಜಿಲ್ಲೆಗಳು, ವಿಭಾಗಗಳಿಗೆ ವಿಶೇಷ ಅನುದಾನ, ಬಂಪರ್​ ಕೊಡುಗೆ ಹಾಗೂ ಪ್ರಮುಖ ಯೋಜನೆಗಳನ್ನು ಘೋಷಿಸಿದ್ದಾರೆ.

ರಾಜ್ಯದ ಸರ್ಕಾರಿ ಹಾಗೂ ಫ್ರೌಡ ಶಾಲೆಗಳ ಅತಿಥಿ ಶಿಕ್ಷಕರಿಗೆ ಮಾಸಿಕ 2000 ರೂ. ಗೌರವ ಧನವನ್ನು ನೀಡಿದರೆ, ಬಿಸಿಯೂಟ ಕಾರ್ಯಕರ್ತೆಯರಿಗೆ ಮಾಸಿಕ 1000 ರೂ. ಘೋಷಿಸುವ ಮೂಲಕ ಬಜೆಟ್​ ಪ್ರಾರಂಭಿಸಿದರು. ಮೀನುಗಾರಿಕೆ, ಚಿತ್ರೋದ್ಯಮ, ಶಿಕ್ಷಣ ಇಲಾಖೆ, ಸಣ್ಣ ಕೈಗಾರಿಕೆ, ಇಂಧನ ಇಲಾಖೆ, ರೈತರು, ನೀರಾವರಿ ಇಲಾಖೆ, ಸಾರಿಗೆ ಇಲಾಖೆ, ಬೆಂಗಳೂರು ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಗುತ್ತಿಗೆ ಕಾಮಗಾರಿ ಸೇರಿದಂತೆ ಇಲಾಖಾವಾರು ಅನುದಾನ ಹಂಚಿಕೆ ಮಾಡಲಾಯಿತು.

ರಾಜ್ಯ ಬಜೆಟ್​ನ ಪ್ರಮುಖ ಘೋಷಣೆಗಳಿವು

  • ರಾಜ್ಯ ನಾಗರಿಕ ಸೇವೆಗಳಲ್ಲಿ 13 ಬುಡಕಟ್ಟು ಸಮುದಾಯಗಳಿಗೆ ನೇರ ಉದ್ಯೋಗಾವಕಾಶ
  • ಬಾದಾಮಿ ಮತ್ತು ಚಿತ್ರದುರ್ಗದಲ್ಲಿ ಹೊಸ ಟ್ರಾಮಾ ಕೇರ್ ಕೇಂದ್ರ ಸ್ಥಾಪನೆ
  • ಮಂಡ್ಯದಲ್ಲಿ ಹೊಸ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ
  • ಈ ವರ್ಷದ ಒಟ್ಟು ಸಾಲ 1.16 ಲಕ್ಷ ಕೋಟಿ ರೂ.
  • ತುಮಕೂರಿನಲ್ಲಿ ಜಪಾನೀಸ್ ಕೈಗಾರಿಕಾ ಉದ್ಯಾನವನ ಅಭಿವೃದ್ಧಿ
  • ಸಾವಯವ ಮತ್ತು ರಾಗಿ ಕೃಷಿಗೆ 20 ಕೋಟಿ ರೂ. ಬೆಂಬಲ
  • ನೇಕಾರರಿಗೆ 100 ಕೋಟಿ ರೂ. ನೆರವು
  • 20 ಎಚ್‌ಪಿ (10 ಎಚ್‌ಪಿಯಿಂದ ಹೆಚ್ಚಳ) ವರೆಗೆ ಸೆಟಪ್ ಹೊಂದಿರುವ ಪವರ್‌ಲೂಮ್ ನೇಕಾರರು ಈಗ ಸಬ್ಸಿಡಿ ಮತ್ತು ಬೆಂಬಲಕ್ಕೆ ಅರ್ಹ
  • ಉದ್ಯಮಶೀಲತಾ ಯೋಜನೆಯಡಿಯಲ್ಲಿ SC ಯುವಕರಿಗೆ ಫಾಸ್ಟ್ ಫುಡ್ ಟ್ರಕ್‌ಗಳ ಸಹಾಯ
  • ಕಾರ್ಕಳ, ರಾಣೆಬೆನ್ನೂರು, ರಾಯಚೂರು, ಕಡೂರು ಮತ್ತು ಚಿಕ್ಕಮಗಳೂರಿನಲ್ಲಿ ಹೊಸ ಜವಳಿ ಉದ್ಯಾನವನಗಳ ಸ್ಥಾಪನೆ
  • 120 ಕೋಟಿ ರೂ.ಗಳ ಯೋಜನೆಯಡಿ 47,859 ಬುಡಕಟ್ಟು ಕುಟುಂಬಗಳಿಗೆ ಪೌಷ್ಟಿಕ ಆಹಾರ ಕಿಟ್‌ಗಳ ಪೂರೈಕೆ
  • ಅಜೀಂ ಪ್ರೇಮ್‌ಜೀ ಫೌಂಡೇಷನ್ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ವಾರದಲ್ಲಿ ಆರು ದಿನ ಮೊಟ್ಟೆ, ಬಾಳೆಹಣ್ಣು ವಿತರಣೆ. ಇದಕ್ಕಾಗಿ 1,500 ಕೋಟಿ ರೂ. ಮೀಸಲು
  • 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅನ್ನ ಸುವಿಧಾ ಯೋಜನೆ
  • ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕಡಲಕೊರೆತ ತಪ್ಪಿಸಲು 200 ಕೋಟಿ ಅನುದಾನ
  • ಎತ್ತಿನಹೊಳೆ ಯೋಜನೆಗೆ 553 ಕೋಟಿ ರೂ. ಅನುದಾನ ಮೀಸಲು
  • ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ 94,000 ಕೋಟಿ ಮೀಸಲು