ನವದೆಹಲಿ: ಒಂದು ರಾಷ್ಟ್ರ ಒಂದು ಚುನಾವಣೆ ಕಲ್ಪನೆಯನ್ನು ಈ ಹಿಂದೆಯೂ ಚುನಾವಣಾ ಆಯೋಗ, ಸಂಸದೀಯ ಸಮಿತಿಗಳು, ಕಾನೂನು ಆಯೋಗ ಸೇರಿ ವಿವಿಧ ಸಾಂವಿಧಾನಿಕ ಸಂಸ್ಥೆಗಳು ದೇಶದ ಮುಂದಿಟ್ಟಿದ್ದವು. ಬಿಜೆಪಿ ಈ ವಿಚಾರವನ್ನು ಚುನಾವಣಾ ಪ್ರಣಾಳಿಕೆಯ ಭಾಗವನ್ನಾಗಿ ಆಯ್ಕೆ ಮಾಡಿಕೊಂಡಿತ್ತು. ಆದರೆ, ಈ ವಿಚಾರದ ಬಗ್ಗೆ ರಾಜಕೀಯ ಪಕ್ಷಗಳಲ್ಲಿ ಈವರೆಗೂ ಒಮ್ಮತ ಮೂಡಿಲ್ಲ.
1983ರಲ್ಲಿ, ಚುನಾವಣಾ ಆಯೋಗ ಏಕಕಾಲಕ್ಕೆ ಚುನಾವಣೆ ನಡೆಸುವ ಕಾರ್ಯಸಾಧ್ಯತೆಯನ್ನು ಅನ್ವೇಷಿಸಲು ಸಲಹೆ ನೀಡಿತ್ತು. 1999ರಲ್ಲಿ ಕಾನೂನು ಆಯೋಗವು ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವಂತೆ ಪ್ರತಿಪಾದಿಸಿತ್ತು. 2015ರಲ್ಲಿ, ಸಂಸದೀಯ ಸ್ಥಾಯಿ ಸಮಿತಿ ಕೂಡ ಈ ಬಗ್ಗೆ ವರದಿ ಸಿದ್ಧಪಡಿಸಿ, ಕಡಿಮೆ ಖರ್ಚು ಮತ್ತು ಸುಧಾರಿತ ಆಡಳಿತದಂತಹ ಪ್ರಯೋಜನಗಳ ಬಗ್ಗೆ ವಿವರಣೆ ನೀಡಿತ್ತು. ಆದರೆ ಇದರಿಂದ ಒಕ್ಕೂಟ ವ್ಯವಸ್ಥೆಗೆ ಹಾನಿಯಾಗಲಿದೆ ಎಂದು ವಿಪಕ್ಷಗಳು ಕಳವಳ ಹೊರಹಾಕಿ, ತಮ್ಮ ವಿರೋಧವನ್ನು ಮುಂದೊಡ್ಡಿದ್ದವು. ಅಸೆಂಬ್ಲಿಗಳ ಅವಧಿಯನ್ನು 170 ದಿನಗಳವರೆಗೆ ವಿಸ್ತರಿಸಲು ಮತ್ತು 599 ದಿನಗಳವರೆಗೆ ಮೊಟಕುಗೊಳಿಸಲು ಅಂದಿನ ಸಮಿತಿ ಸಲಹೆ ನೀಡಿತ್ತು.
2017ರಲ್ಲಿ ನೀತಿ ಆಯೋಗ ಏಕಕಾಲಕ್ಕೆ ಚುನಾವಣೆಯ ಪರಿಕಲ್ಪನೆ ವಿಶ್ಲೇಷಿಸುವ ಚರ್ಚಾ ಪ್ರಬಂಧವನ್ನು ಪ್ರಕಟಿಸಿತು. ಚುನಾವಣೆ ವೆಚ್ಚ ಉಳಿತಾಯ ಮತ್ತು ಆಡಳಿತಾತ್ಮಕ ಪ್ರಯೋಜನಗಳ ಬಗ್ಗೆ ಪ್ರಬಂಧದಲ್ಲಿ ದಾಖಲಿಸಲಾಗಿತ್ತು ಮತ್ತು ಒಕ್ಕೂಟ ವ್ಯವಸ್ಥೆ, ಪ್ರಜಾಪ್ರಭುತ್ವದ ಸುರಕ್ಷತೆಗಳ ಬಗ್ಗೆ ಇರುವ ಕಾಳಜಿಯನ್ನೂ ಅದು ಒಪ್ಪಿಕೊಂಡಿತ್ತು. ಬಿಜೆಪಿ ಹಿರಿಯ ನಾಯಕ ಎಲ್ಕೆ ಅಡ್ವಾಣಿಐವರಂತಹ ನಾಯಕರು ಸೇರಿ ಹಲವರು ಏಕಕಾಲದ ಚುನಾವಣೆ ಬೆಂಬಲಿಸಿದ್ದಾರೆ. ಎಲ್ಲಾ ಚುನಾವಣೆಗಳಿಗೂ ಒಂದೇ ಮತದಾರರ ಪಟ್ಟಿ ಎಂಬ ಪರಿಕಲ್ಪನೆಯೂ ಬಿಜೆಪಿಯ ಅಜೆಂಡಾದಲ್ಲಿದೆ. ಜೆಡಿಯು, ಜೆಡಿಎಸ್, ಶಿರೋಮಣಿ ಅಕಾಲಿದಳ ಮತ್ತು ಬಿಜೆಡಿ ಸೇರಿ ಬಿಜೆಪಿಯ ಕೆಲ ಮಿತ್ರಪಕ್ಷಗಳು ಈ ಕಲ್ಪನೆಗೆ ಬೆಂಬಲ ಸೂಚಿಸಿವೆ. ನಿರಂತರವಾಗಿ ಚುನಾವಣೆ ನಡೆಯುತ್ತಿರುವುದು ಧ್ರುವೀಕರಣದ ಸಮಸ್ಯೆ, ದ್ವೇಷ ಭಾಷಣ ಮತ್ತು ರಾಜಕೀಯ ಪೈಪೋಟಿಗೆ ಕಾರಣವಾಗುತ್ತದೆ. ಮಾದರಿ ನೀತಿ ಸಂಹಿತೆಯ ದೀರ್ಘಾವಧಿಯ ಹೇರಿಕೆಗೂ ಕಾರಣವಾಗುತ್ತದೆ. ಸರ್ಕಾರಿ ಕಾರ್ಯಗಳನ್ನು ಸ್ಥಗಿತಗೊಳಿಸುತ್ತದೆ.
ಅಲ್ಲದೆ, ಇದು ರಾಜಕಾರಣಿಗಳನ್ನು ದೀರ್ಘಾವಧಿಯ ಯೋಜನೆಯಿಂದ ದೂರವಿಡುತ್ತವೆ. ಸರ್ಕಾರಿ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗಳು ತಮ್ಮ ನಿಯಮಿತ ಜವಾಬ್ದಾರಿಗಳಿಗಿಂತ ಚುನಾವಣಾ ಕರ್ತವ್ಯಗಳ ಮೇಲೆ ಹೆಚ್ಚು ಗಮನಹರಿಸುವಂತೆ ಮಾಡುತ್ತದೆ ಎಂದು ವಾದಿಸಲಾಗಿದೆ. ಚುನಾವಣೆಗಳಿಗೆ ಹೆಚ್ಚಿನ ಖರ್ಚು ವ್ಯಾಪಕ ಭ್ರಷ್ಟಾಚಾರಕ್ಕೂ ಕಾರಣವಾಗುತ್ತದೆ. ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಕೋವಿಂದ್ ನೇತೃತ್ವದ ಸಮಿತಿಗೆ ನೀಡಿದ ತನ್ನ ಪ್ರಸ್ತುತಿಯಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಯನ್ನು ಬಲವಾಗಿ ಬೆಂಬಲಿಸಿದೆ. ಚುನಾವಣೆಗೆ ತಿಂಗಳ ಮೊದಲು ಮತ್ತು ನಂತರ ಹೂಡಿಕೆ ಮಾಡಲು ಖಾಸಗಿ ವಲಯವು ಹಿಂಜರಿ ಯುತ್ತದೆ. ಆರ್ಥಿಕ ಚಟುವಟಿಕೆ, ಒಟ್ಟಾರೆ ಅಭಿವೃದ್ಧಿ ಮತ್ತು ಉದ್ಯೋಗಗಳು, ಜೀವನೋಪಾಯದ ಮೇಲೆ ಇದು ಪರಿಣಾಮ ಬೀರುವುದರಿಂದ ಏಕಕಾಲದ ಚುನಾವಣೆಗಳು ಅಗತ್ಯ ಎಂದು ಸಿಐಐ ಅಭಿಪ್ರಾಯಪಟ್ಟಿದೆ.
ಕಾಂಗ್ರೆಸ್ ವಿರೋಧ: ಕಾಂಗ್ರೆಸ್ ಜತೆಗೆ ವಿರೋಧ ಪಕ್ಷಗಳಾದ ಟಿಎಂಸಿ, ಡಿಎಂಕೆ ಮತ್ತು ಎಎಪಿ ಕೂಡ ಈ ಕಲ್ಪನೆಯನ್ನು ತೀವ್ರವಾಗಿ ವಿರೋಧಿಸಿವೆ. ಇದು ಪ್ರಾದೇಶಿಕ ಮತ್ತು ಸ್ಥಳೀಯ ಕಾಳಜಿಗಳನ್ನು ಬದಿಗೆ ತಳ್ಳಲಿದೆ. ಇದು ರಾಜಕೀಯ ಸಂಭಾಷಣೆಯ ಏಕರೂಪತೆಗೆ ಕಾರಣವಾಗುತ್ತದೆ ಮತ್ತು ಸಣ್ಣ ಪಕ್ಷಗಳು ಮತ್ತು ರಾಜ್ಯಗಳಿಗೆ ತಮ್ಮ ಆಲೋಚನೆಗಳನ್ನು ದೇಶದ ಮುಂದಿರಿಸಲು ಈ ಏಕಕಾಲದ ಚುನಾವಣೆಯಿಂದ ಸಾಧ್ಯವಾಗುವುದಿಲ್ಲ ಎಂದು ವಾದಿಸಲಾಗಿದೆ. ಇದು ಸಂವಿಧಾನದ ಮೂಲ ರಚನೆ ಉಲ್ಲಂಘಿಸಬಹುದು. ಪ್ರಜಾಪ್ರಭುತ್ವ ವಿರೋಧಿ ಮತ್ತು ಒಕ್ಕೂಟ ವ್ಯವಸ್ಥೆಯ ವಿರೋಧಿಯಾಗಲಿದೆ. ಪ್ರಾದೇಶಿಕ ಪಕ್ಷಗಳನ್ನು ಧ್ವನಿ ಕಳೆದುಕೊಳ್ಳುವಂತೆ ಮಾಡಿ, ರಾಷ್ಟ್ರೀಯ ಪಕ್ಷಗಳ ಪ್ರಾಬಲ್ಯ ಪೋ›ತ್ಸಾಹಿಸಲಿದೆ ಮತ್ತು ಅಧ್ಯಕ್ಷೀಯ ಸ್ವರೂಪದ ಸರ್ಕಾರಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿವೆ.