ನವದೆಹಲಿ : ಕರ್ನಾಟಕದ ಅಭಿವೃದ್ಧಿ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕರ್ನಾಟಕದ ಸಚಿವರೊಂದಿಗೆ ಚರ್ಚೆ ನಡೆಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿ ತಲುಪಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ಮೇಕೆದಾಟು ಯೋಜನೆ ಅನುಷ್ಠಾನ ಮಾಡಿಯೇ ತೀರುತ್ತೇವೆಂದು ಹೇಳಿದ್ದಾರೆ.
ಇಂದು ಸಂಜೆ 6.30 ರ ನಂತರ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದು, ನಾಳೆ ಕರ್ನಾಟಕದ ಎಲ್ಲಾ ಸಚಿವರನ್ನೂ ಭೇಟಿ ಮಾಡುವ ಕಾರ್ಯಕ್ರಮವಿದೆ ಎಂದು ಬಿಎಸ್ವೈ ತಿಳಿಸಿದರು. ಈ ಸಂದರ್ಭದಲ್ಲಿ, ರಾಜ್ಯದ ಮೇಕೆದಾಟು ಯೋಜನೆಗೆ ಅವಕಾಶ ಕೊಡಬಾರದೆಂದು ತಮಿಳುನಾಡಿನ ಸರ್ವಪಕ್ಷ ನಿಯೋಗ ಪ್ರಧಾನಿಯನ್ನು ಭೇಟಿ ಮಾಡಿದ್ದು, ಕೇಂದ್ರದ ಮೇಲೆ ಒತ್ತಡ ತರುತ್ತಿದೆ. ಜೊತೆಗೆ ರಾಷ್ಟ್ರಪತಿಯವರನ್ನೂ ಭೇಟಿ ಮಾಡಲು ನಿರ್ಧರಿಸಿದ್ದಾರೆ ಎಂದು ಪತ್ರಕರ್ತರು ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಎಸ್ವೈ, "ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ನಾನು ಮನದಟ್ಟು ಮಾಡಿದ್ದರೂ ಯಾಕೋ ಅವರು ಹಿಡಿದ ಹಟ ಬಿಡುತ್ತಿಲ್ಲ. ಆದರೆ, ಈ ಯೋಜನೆ ಮಾಡಲು ನಮಗೆ ಕಾನೂನಿನಲ್ಲೂ ಸಂಪೂರ್ಣ ಅವಕಾಶವಿದೆ. ಅದಕ್ಕಾಗಿ ನಾವು ಪೂರ್ಣ ಪ್ರಯತ್ನ ಮಾಡುತ್ತಿದ್ದೇವೆ.. ಯಾವುದೇ ಅನುಮಾನ ಬೇಡ. ರಾಜ್ಯದ ಜನತೆಗೆ ಭರವಸೆ ಕೊಡುತ್ತೇನೆ - ಮೇಕೆದಾಟು ಯೋಜನೆ ನೂರಕ್ಕೆ ನೂರು ಕಾರ್ಯರೂಪಕ್ಕೆ ತರುತ್ತೇವೆ" ಎಂದರು.
ದೆಹಲಿಯಲ್ಲಿ ತಮಿಳುನಾಡು ಚಟುವಟಿಕೆಯೂ ಬಿರುಸಿನಿಂದ ಸಾಗಿರುವಾಗ, ಯಡಿಯೂರಪ್ಪ ಅವರ ಈ ಧೋರಣೆ ಮಹತ್ವ ಪಡೆದುಕೊಂಡಿದೆ.