Techie : ಪತ್ನಿ ಮತ್ತು ಅತ್ತೆ-ಮಾವನ ಕಿರುಕುಳ ತಾಳಲಾರದೇ ಟೆಕ್ಕಿಯೊಬ್ಬ ಹೋಟೆಲ್ ರೂಮಿನಲ್ಲಿ ಸಾವಿಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಸಾವಿಗೂ ಮುನ್ನ ಪತ್ನಿ ಮತ್ತು ಆಕೆಯ ಕುಟುಂಬದಿಂದ ಅನುಭವಿಸಿದ ಮಾನಸಿಕ ಕಿರುಕುಳವನ್ನು ವಿಡಿಯೋ ರೆಕಾರ್ಡ್ ಮಾಡಿ ಬಹಿರಂಗಪಡಿಸಿದ್ದಾರೆ.
ವಿಡಿಯೋದಲ್ಲಿ ಮಾತನಾಡಿರುವ ಮೃತ ಮೋಹಿತ್ ಕುಮಾರ್, ತನ್ನ ಎಲ್ಲ ಆಸ್ತಿಯನ್ನು ತನ್ನ ಪತ್ನಿ ಮತ್ತು ಅತ್ತೆಯ ಹೆಸರಿಗೆ ವರ್ಗಾಯಿಸಲು ಒತ್ತಡ ಹೇರಲಾಗುತ್ತಿದೆ ಮತ್ತು ಸುಳ್ಳು ವರದಕ್ಷಿಣೆ ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಈ ವಿಡಿಯೋ ನಿಮಗೆ ಸಿಗುವ ಹೊತ್ತಿಗೆ ನಾನು ಈ ಲೋಕದಿಂದ ದೂರವಾಗಿರುತ್ತೇನೆ. ಪುರುಷರಿಗಾಗಿಯೇ ಒಂದು ಕಾನೂನು ಇದ್ದಿದ್ದರೆ, ಬಹುಶಃ ನಾನು ಈ ಹೆಜ್ಜೆ ಇಡುತ್ತಿರಲಿಲ್ಲ. ನನ್ನ ಹೆಂಡತಿ ಮತ್ತು ಆಕೆಯ ಕುಟುಂಬದವರು ನನಗೆ ಮಾನಸಿಕ ಹಿಂಸೆ ನೀಡುವುದನ್ನು ಸಹಿಸಲು ಸಾಧ್ಯವಾಗಲಿಲ್ಲ. ಅಮ್ಮ, ಅಪ್ಪ, ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಮೋಹಿತ್ ಹೇಳಿದ್ದಾರೆ.
ಉತ್ತರ ಪ್ರದೇಶದ ಔರೈಯಾ ಜಿಲ್ಲೆಯವರಾದ ಮೋಹಿತ್, ಪ್ರಿಯಾ ಯಾದವ್ ಜೊತೆ ದೀರ್ಘಕಾಲದ ಸಂಬಂಧ ಹೊಂದಿದ್ದರು, ನಂತರ ಆಕೆಯನ್ನು ವಿವಾಹವಾದರು. ಪ್ರಿಯಾ, ಬಿಹಾರದ ಸಮಷ್ಟಿಪುರದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಕೆಲಸಕ್ಕೆ ಸೇರುವವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ಅದಾದ ನಂತರ, ಪ್ರಿಯಾ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದಳು ಮತ್ತು ಮೋಹಿತ್‌ಗೆ ಮಾನಸಿಕವಾಗಿ ಕಿರುಕುಳ ನೀಡಲು ಪ್ರಾರಂಭಿಸಿದಳು ಎಂದು ಆತನ ಕುಟುಂಬ ಆರೋಪಿದೆ.
ನನ್ನ ಪತ್ನಿ ಪ್ರಿಯಾ ಯಾದವ್ ಅವರ ತಾಯಿ ನಮ್ಮ ಮಗುವಿನ ಗರ್ಭಪಾತಕ್ಕೆ ಒತ್ತಾಯಿಸಿ ಎಲ್ಲಾ ಆಭರಣಗಳು ಮತ್ತು ಸೀರೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಮನೆ ಮತ್ತು ಆಸ್ತಿಯನ್ನು ಅವರ ಹೆಸರಿಗೆ ವರ್ಗಾಯಿಸದಿದ್ದರೆ, ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಸುಳ್ಳು ವರದಕ್ಷಿಣೆ ಪ್ರಕರಣ ದಾಖಲಿಸುವುದಾಗಿ ನನ್ನ ಹೆಂಡತಿ ಬೆದರಿಕೆ ಹಾಕುತ್ತಿದ್ದಾಳೆ. ನನ್ನ ಮರಣದ ನಂತರವೂ ನನಗೆ ನ್ಯಾಯ ಸಿಗದಿದ್ದರೆ, ನನ್ನ ಚಿತಾಭಸ್ಮವನ್ನು ಚರಂಡಿಯಲ್ಲಿ ಮುಳುಗಿಸಲಿ. ಅಪ್ಪ, ಅಮ್ಮ, ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು ಸಾಧ್ಯವಾಗಲಿಲ್ಲ ಎಂದು ಮೋಹಿತ್ ವಿಡಿಯೋದಲ್ಲಿ ಹೇಳಿದ್ದಾರೆ.
ರೈಲ್ವೆ ಸ್ಟೇಷನ್ ರಸ್ತೆಯ ಬಳಿಯ ಜಾಲಿ ಹೋಟೆಲ್‌ನ 105 ನೇ ಕೊಠಡಿಯಿಂದ ಪೊಲೀಸರು ಮೋಹಿತ್ ಶವವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಮಾಹಿತಿಯನ್ನು ಪೊಲೀಸ್ ವರಿಷ್ಠಾಧಿಕಾರಿ ಅಭಯ್ ನಾಥ್ ತ್ರಿಪಾಠಿ ದೃಢಪಡಿಸಿದ್ದಾರೆ. ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಜಾಲಿ ಹೋಟೆಲ್‌ನಿಂದ ನಮಗೆ ಮಾಹಿತಿ ಬಂದಿತ್ತು. ಮೋಹಿತ್ ಕೊಠಡಿ ಸಂಖ್ಯೆ 105 ಅನ್ನು ಪಡೆದು ಒಳಗೆ ಹೋಗಿ, ಹೊರಗೆ ಬಂದಿರಲಿಲ್ಲ. ನಾವು ಬಾಗಿಲು ತೆರೆದಾಗ, ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರು. ನಾವು ವಿಧಿವಿಜ್ಞಾನ ಪರೀಕ್ಷೆ ನಡೆಸಿ, ವರದಿಯನ್ನು ಸಿದ್ಧಪಡಿಸಿದ್ದೇವೆ. ಪ್ರಾಥಮಿಕವಾಗಿ, ಇದು ಆತ್ಮಹತ್ಯೆ ಎಂದು ತೋರುತ್ತದೆ. ಅವರ ವಿಳಾಸವನ್ನು ಪತ್ತೆಹಚ್ಚಲಾಗಿದೆ ಮತ್ತು ಕುಟುಂಬಕ್ಕೆ ತಿಳಿಸಲಾಗಿದೆ. ಎಂದರು.
ಮರಣೋತ್ತರ ಪರೀಕ್ಷೆಯ ನಂತರ, ಮೋಹಿತ್ ಅವರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಅಂತ್ಯಕ್ರಿಯೆಗಾಗಿ ಔರೈಯಾಗೆ ಕೊಂಡೊಯ್ದಿದ್ದಾರೆ. (ಏಜೆನ್ಸೀಸ್)