ನ್ಯೂಸ್

ಕೇಂದ್ರ ಸರ್ಕಾರ ಬಾಬಾ ರಾಮ್​ದೇವ್ ವಿರುದ್ಧ ಕ್ರಮಕೈಗೊಳ್ಳಬೇಕು: ಐಎಂಎ ಹೀಗೆ ಒತ್ತಾಯಿಸುತ್ತಿರುವುದೇಕೆ?

Webdesk - Ravikanth

ನವದೆಹಲಿ: ಯೋಗ ಹಾಗೂ ಆಯುರ್ವೇದದ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತ, ಅನುಕೂಲಗಳನ್ನು ಮಾಡುತ್ತ ಬಂದಿರುವ ಪತಂಜಲಿ ಸಂಸ್ಥೆಯ ಮುಖ್ಯಸ್ಥ, ಯೋಗಗುರು ಬಾಬಾ ರಾಮ್​ದೇವ್​ ವಿರುದ್ಧ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂಬ ಒತ್ತಾಯದ ದನಿಯೊಂದು ಹುಟ್ಟಿಕೊಂಡಿದೆ. ಅಷ್ಟಕ್ಕೂ ಹೀಗೊಂದು ಆಗ್ರಹ ವ್ಯಕ್ತಪಡಿಸುತ್ತಿರುವುದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್​.

ಅಲೋಪಥಿ ವೈದ್ಯಪದ್ಧತಿ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿ, ಅಪಪ್ರಚಾರ ಮಾಡುವ ಮೂಲಕ ಬಾಬಾ ರಾಮ್​ದೇವ್​ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿರುವ ಭಾರತೀಯ ವೈದ್ಯಕೀಯ ಸಂಘವು, ಕೇಂದ್ರ ಸರ್ಕಾರ ಬಾಬಾ ರಾಮ್​ದೇವ್​ ವಿರುದ್ಧ ಕ್ರಮಜರುಗಿಸಬೇಕು ಎಂದು ಒತ್ತಾಯಿಸಿದೆ.

ಬಾಬಾ ರಾಮ್​ದೇವ್​ ಸುಶಿಕ್ಷಿತ ಸಮಾಜಕ್ಕೆ ಹಾಗೂ ದೇಶಕ್ಕೆ ಆತಂಕ ಮಾತ್ರವಲ್ಲ ಅವರಿಂದಾಗಿ ಬಡವರು ಬಲಿಪಶುವಾಗುತ್ತಿದ್ದಾರೆ. ಅವರ ವಿರುದ್ಧ ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಐಎಂಎ ಒತ್ತಾಯಿಸಿದೆ.

ರೆಮ್​ಡೆಸಿವಿರ್​, ಫೇವಿಫ್ಲ್ಯೂ ಸೇರಿ ಡ್ರಗ್​ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಮಾನ್ಯತೆ ಇರುವ ಇತರ ಎಲ್ಲ ಔಷಧಗಳು ಕೋವಿಡ್​-19 ರೋಗಿಗಳ ಚಿಕಿತ್ಸೆಯಲ್ಲಿ ವಿಫಲವಾಗಿವೆ. ಲಕ್ಷಾಂತರ ಮಂದಿ ಅಲೋಪಥಿ ಔಷಧಗಳನ್ನು ಸೇವಿಸಿದ ಬಳಿಕ ಮೃತಪಟ್ಟಿದ್ದಾರೆ. ಅಲೋಪಥಿ ಒಂದು ಸ್ಟುಪಿಡ್ ಸೈನ್ಸ್​ ಎಂದು ರಾಮ್​ದೇವ್​ ಹೇಳಿರುವ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಅದನ್ನು ಉಲ್ಲೇಖಿಸಿ ಐಎಂಎ ಈ ಒತ್ತಾಯ ಹೇರಿದೆ. (ಏಜೆನ್ಸೀಸ್)