ನವದೆಹಲಿ: ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯವಾಗಿರಲು ಡಯಟ್ ಮತ್ತು ಜಿಮ್ ಮೊರೆ ಹೋಗುತ್ತಾರೆ. ಹೀಗೆ ಮಾಡುವುದರಿಂದ ದೇಹ ಫಿಟ್ ಆಗುತ್ತದೆ. ದೀರ್ಘಕಾಲದವರೆಗೆ ಜಿಮ್‌ನಲ್ಲಿಯೇ ಇದ್ದು ದೇಹವನ್ನು ಸದೃಢಗೊಳಿಸಲು ಶ್ರಮಿಸುತ್ತಿದ್ದಾರೆ. ಆದರೆ, ಅತಿಯಾಗಿ ವ್ಯಾಯಾಮ ಮಾಡುವುದು ಕೂಡ ಒಳ್ಳೆಯದಲ್ಲ. ಈ ರೀತಿ ಮಾಡಿ ಹೃದಯಾಘಾತದಿಂದ ಮೃತಪಟ್ಟವರು ಕೂಡ ಸಾಕಷ್ಟಿದ್ದಾರೆ. ಇದೀಗ ಜಗತ್ಪ್ರಸಿದ್ಧ ಬಾಡಿಬಿಲ್ಡರ್ ಇಲಿಯಾ ಯೆಫಿಮ್ಚಿಕ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಯುರೋಪ್ನ ಬೆಲುರಸ್ ಮೂಲದ ಯೆಫಿಮ್ಚಿಕ್ ಅವರಿಗೆ ಕೇವಲ 36 ವರ್ಷ ವಯಸ್ಸಾಗಿತ್ತು. ತುಂಬಾ ಫಿಟ್ ಆಗಿದ್ದ ಯೆಫಿಮ್ಚಿಕ್ ಹೃದಯಾಘಾತದಿಂದ ಮೃತಪಟ್ಟಿರುವ ಸುದ್ದಿ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಕೆಲವರು ಅತಿಯಾದ ಜಿಮ್ ಕಾರಣ ಎಂದರೆ, ಇನ್ನು ಕೆಲವರು ಬಾಡಿ ಬೆಳೆಸಲು ತೆಗೆದುಕೊಳ್ಳುತ್ತಿದ್ದ ಪ್ರೋಟೀನ್ ಕಾರಣ ಎನ್ನುತ್ತಿದ್ದಾರೆ. ಫಿಟ್ ಆಗಿ ಕಾಣುವುದಕ್ಕೂ ಆಂತರಿಕವಾಗಿ ಫಿಟ್ ಆಗಿರುವುದಕ್ಕೂ ಇರುವ ವ್ಯತ್ಯಾಸವೇನು ಎಂದು ಅನೇಕರು ಚರ್ಚಿಸುತ್ತಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಇಲಿಯಾ ಯೆಫಿಮ್ಚಿಕ್ ಅವರು ಸೆ. 6ರಂದು ಹೃದಯಾಘಾತಕ್ಕೆ ಒಳಗಾಗಿ ಕೋಮಾ ಸ್ಥಿತಿಗೆ ತಲುಪಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಸೆಪ್ಟೆಂಬರ್ 11ರಂದು ಸಾವಿಗೀಡಾದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಯೆಫಿಮ್ಚಿಕ್ಗೆ ಹೃದಯಾಘಾತವಾದಾಗ ಅವರ ಪತ್ನಿ ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ. ಆಂಬ್ಯುಲೆನ್ಸ್ ಬರುವವರೆಗೂ ಅವರಿಗೆ ಸಿಪಿಆರ್ ನಡೆಸಲಾಯಿತು. ಆದರೆ, ಯಾವುದೇ ಪ್ರಯೋಜನಾ ಆಗಲಿಲ್ಲ.
ಇಲಿಯಾ ಯೆಫಿಮ್ಚಿಕ್ ಅವರು ಕಟ್ಟುನಿಟ್ಟಾದ ಆಹಾರ ಕ್ರಮದ ಮೂಲಕ 25 ಇಂಚಿನ ಬೈಸೆಪ್‌ಗಳನ್ನು ನಿರ್ವಹಿಸುತ್ತಿದ್ದರು. ದಿನಕ್ಕೆ ಅವರು 16,500 ಕ್ಯಾಲೊರಿಗಳನ್ನು ಸೇವಿಸುತ್ತಿದ್ದರು. ಯೆಫಿಮ್ಚಿಕ್ ವೃತ್ತಿಪರ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಎಂದಿಗೂ ಸ್ಪರ್ಧಿಸದಿದ್ದರೂ, ತಮ್ಮ ತರಬೇತಿ ದಿನಚರಿಗಳನ್ನು ಆಗಾಗ ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತಿದ್ದರು. ಇದರಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಅನೇಕ ಫಾಲೋವರ್ಸ್ ಹೊಂದಿದ್ದರು. (ಏಜೆನ್ಸೀಸ್)