ಕಲಬುರಗಿ: ಪಿಎಸ್ಐ ಹುದ್ದೆ ನೇಮಕಾತಿಯಲ್ಲಿನ ಅಕ್ರಮ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಆರೋಪಿಯೊಬ್ಬನಿಗೆ ಕಲಬುರಗಿ ಹೈಕೋರ್ಟ್ ಪೀಠದಿಂದ ಜಾಮೀನು ಮಂಜೂರಾಗಿದೆ.
ಇಡೀ ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ಪಿಎಸ್ಐ ಎಕ್ಸಾಂ ಹಗರಣ ಪ್ರಕರಣವು ಕರ್ನಾಟಕ ಪೊಲೀಸ್ ಇಲಾಖೆ ಮತ್ತು ರಾಜ್ಯ ಸರ್ಕಾರದ ಮಾನ ತೆಗೆದಿದೆ. ಹಗರಣದಲ್ಲಿ 50 ಕೋಟಿಗೂ ಅಧಿಕ ಹಣಕಾಸಿನ ವ್ಯವಹಾರ ನಡೆದಿದ್ದು, ಈಗಾಗಲೇ ಈ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಪೊಲೀಸರು, ಏಜೆಂಟರು, ಕೆಲ ಎಫ್ಡಿಎ, ಎಸ್ಡಿಎ ಸೇರಿ ಹಲವರನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಬಹುತೇಕರು ಜಾಮೀನು ಕೋರಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಇದೀಗ ಒಬ್ಬ ಆರೋಪಿಗೆ ಜಾಮೀನು ಮಂಜೂರಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ದಾಖಲಾದ ಕೇಸ್ನ ಆರೋಪಿ ಸುರೇಶ್ ಕಾಟೆಗಾಂವ್ಗೆ ಕಲಬುರಗಿ ಹೈಕೋರ್ಟ್ ಪೀಠದ ನ್ಯಾಯಾಧೀಶರಾದ ಉಮಾ ಅವರು ಬುಧವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಅಕ್ರಮದಲ್ಲಿ ಪ್ರಮುಖ ಆರೋಪಿಯಾಗಿರುವ ದಿವ್ಯಾ ಹಾಗರಗಿಯ ಗಂಡ ರಾಜೇಶ್ ಹಾಗರಗಿಗೆ ಜಾಮೀನು ನಿರಾಕರಿಸಿದ್ದಾರೆ. ಪಿಎಸ್ಐ ನೇಮಕಾತಿ ಅಕ್ರಮ ಬಯಲಾಗುತ್ತಿದ್ದಂತೆಯೇ ಕಲಬುರಗಿಯಿಂದ ನಾಪತ್ತೆಯಾಗಿ ಗುಜರಾತ್ನಲ್ಲೂ ಕೆಲ ಕಾಲ ತಲೆಮರೆಸಿಕೊಂಡಿದ್ದ ದಿವ್ಯಾ ಹಾಗರಗಿಗೆ ಪುಣೆಯಲ್ಲಿ ಪರಿಚಿತ ಸುರೇಶ್ ಕಾಟೇಗಾಂವ್ ಆಶ್ರಯ ನೀಡಿದ್ದ. ಏ.13ರಂದು ನಾಪತ್ತೆಯಾಗಿದ್ದ ದಿವ್ಯಾಳಿಗಾಗಿ ಸಿಐಡಿ ಪೊಲೀಸರು ತೀವ್ರ ಹುಡುಕಾಡ ನಡೆಸಿದ್ದರು. ಏಪ್ರಿಲ್ ಕೊನೇ ವಾರದದಲ್ಲಿ ಪುಣೆಯಲ್ಲಿ ಸಿಕ್ಕಿಬಿದ್ದಿದ್ದಳು. ಈಕೆಗೆ ಆಶ್ರಯಕೊಟ್ಟ ಆರೋಪದಲ್ಲಿ ಸುರೇಶ್ ಕಾಟೆಗಾಂವ್ನನ್ನೂ ಬಂಧಿಸಲಾಗಿತ್ತು.
ಸುರೇಶ್ ಕಾಟೇಗಾಂವ್ ಮಹಾರಾಷ್ಟ್ರದ ಸ್ಥಳೀಯ ಕಾಂಗ್ರೆಸ್ ಮುಖಂಡ ಜತೆಗೆ ಉಧ್ಯಮಿ ಕೂಡ. ಈತನ ಸಹೋದರಿ ಸುರೇಖಾ ಕಾಂಗ್ರೆಸ್ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಸುರೇಖಾ ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಸದ್ಯ ಸದಸ್ಯೆಯಾಗಿದ್ದಾರೆ. ದಿವ್ಯಾ ಸದ್ಯ ಜೈಲಿನಲ್ಲಿದ್ದಾಳೆ.