ನ್ಯೂಸ್

ವಿದೇಶದಿಂದ ಅಕ್ರಮ ಚಿನ್ನ ಕಳ್ಳಸಾಗಾಣೆ ಪ್ರಕರಣ; ನಟಿ ರನ್ಯಾ ರಾವ್​ಗೆ 102 ಕೋಟಿ ರೂ. ದಂಡ ವಿಧಿಸಿದ ಡಿಆರ್​ಐ| Actor Ranya Rao

Actor Ranya Rao: ದುಬೈನಿಂದ ಅಕ್ರಮ ಚಿನ್ನ ಕಳ್ಳಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿಂತೆ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸ್ಯಾಂಡಲ್​ವುಡ್ ನಟಿ ರನ್ಯಾ ರಾವ್​ಗೆ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) 102 ಕೋಟಿ ರೂಪಾಯಿ ದಂಡ ವಿಧಿಸಿದೆ ಎಂದು ಮಂಗಳವಾರ (ಸೆ. 02) ವರದಿಯಾಗಿದೆ.

ಜೊತೆಗೆ ಪ್ರಕರಣದಲ್ಲಿ ಭಾಗಿದಾರರಾಗಿರುವ ಹೋಟೆಲ್​ ಉದ್ಯಮಿ ತರುಣ್ ಕೊಂಡರಾಜುಗೆ 63 ಕೋಟಿ ರೂ. ಆಭರಣ ವ್ಯಾಪಾರಿಗಳಾದ ಸಾಹಿಲ್ ಸಕಾರಿಯಾ ಜೈನ್ ಮತ್ತು ಭರತ್ ಕುಮಾರ್ ಜೈನ್​ಗೆ ತಲಾ 56 ಕೋಟಿ ರೂ. ಡಿಆರ್​ಐ ದಂಡ ವಿಧಿಸಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಮಂಗಳವಾರ(ಸೆ. 02) ಡಿಆರ್​ಐ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ನಾಲ್ವರು ಆರೋಪಿಗಳಿಗೆ ತಲಾ ಪ್ರತಿಯೊಬ್ಬರಿಗೆ 250 ಪುಟಗಳ ನೋಟಿಸ್ ಮತ್ತು 2,500 ಪುಟಗಳ ಅನುಬಂಧವನ್ನು ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಪೊಲೀಸ್ ಮಹಾನಿರ್ದೇಶಕ ಶ್ರೇಣಿಯ ಅಧಿಕಾರಿ ಕೆ.ರಾಮಚಂದ್ರ ರಾವ್ ಮಲಮಗಳಾಗಿರುವ ರನ್ಯಾ, ಮಾರ್ಚ್ 3 ರಂದು ದುಬೈನಿಂದ ಆಗಮಿಸುತ್ತಿದ್ದಾಗ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ 14.8 ಕೆಜಿ ಅಕ್ರಮ ಚಿನ್ನದ ಜೊತೆ ಡಿಆರ್​ಐ ಅಧಿಕಾರಿಗಳ ಬಲೆಗೆ ಬಿದ್ದಿದ್ದರು.

ಜುಲೈನಲ್ಲಿ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾಗೆ ಕಠಿಣ ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ (COFEPOSA) ಅಡಿಯಲ್ಲಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಸಂಬಂಧ ಶಿಕ್ಷೆ ತಡೆಕೋರಿ ರನ್ಯಾ ಹೈಕೋರ್ಟ್ ಮೆಟ್ಟಿಲೇರಿದ್ದು ಸೆ. 11ರಂದು ವಿಚಾರಣೆಗೆ ಬರಲಿದೆ ಎನ್ನಲಾಗಿದೆ. (ಏಜೆನ್ಸೀಸ್)