ನ್ಯೂಸ್

ಬಿಹಾರಕ್ಕೆ ಸ್ಟಾಲಿನ್​​ ಭೇಟಿ; ನಿಮಗೆ ಧೈರ್ಯವಿದ್ದರೆ.. ಸನಾತನ ವಿರೋಧಿ ಹೇಳಿಕೆ ಪುನರಾವರ್ತಿಸಿ ಎಂದ ತಮಿಳುನಾಡು ಬಿಜೆಪಿ ! | MK Stalin Bihar Visit

MK Stalin Bihar Visit: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಮತದಾರ ಅಧಿಕಾರ ಯಾತ್ರೆಯಲ್ಲಿ ಭಾಗವಹಿಸಲು ಬಿಹಾರಕ್ಕೆ ಭೇಟಿ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ಗೆ ಧೈರ್ಯವಿದ್ದರೆ, ಈ ಹಿಂದೆ ಅವರ ಪಕ್ಷ ನಾಯಕರು ನೀಡಿದ ಸನಾತನ ವಿರೋಧಿ ಹೇಳಿಕೆಗಳನ್ನು ಪುನರಾವರ್ತಿಸುವಂತೆ ತಮಿಳುನಾಡು ಬಿಜೆಪಿ ಬುಧವಾರ (ಆಗಸ್ಟ್​​ 27) ಸವಾಲು ಹಾಕಿದೆ.

ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​​ ಹಂಚಿಕೊಂಡಿರುವ ತಮಿಳುನಾಡು ಬಿಜೆಪಿ ರಾಜ್ಯ ವಕ್ತಾರ ನಾರಾಯಣನ್ ತಿರುಪತಿ, ಬಿಹಾರಕ್ಕೆ ತೆರಳುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಧೈರ್ಯವಿದ್ದರೆ, 'ಸನಾತನ ಧರ್ಮ ನಾಶವಾಗಬೇಕು' ಎಂಬ ನಿಮ್ಮ ಮಗ ಉದಯನಿಧಿ ಹೇಳಿಕೆಯ ಬಗ್ಗೆ ಅಲ್ಲಿ ಮಾತನಾಡಬಹುದೇ? ಇದಲ್ಲದೆ, ನಿಮ್ಮ ಸಂಬಂಧಿ ಮತ್ತು ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರು ತಮಿಳುನಾಡಿನಲ್ಲಿ ಬಿಹಾರಿಗಳು ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ ಎಂಬ ಹೇಳಿಕೆಗಳನ್ನು ಪುನರಾವರ್ತಿಸಬಹುದೇ ಎಂದು ಸವಾಲು ಹಾಕಿದ್ದಾರೆ.

ನೀವು ಸದಾ ತತ್ವಗಳಿಗೆ ಬದ್ಧರಾಗಿರುವವರಲ್ಲವೇ? ನೀವು ದ್ರಾವಿಡ ಮಾದರಿಯ ಸ್ವಾಭಿಮಾನದ ಸಿಂಹವಲ್ಲವೇ? ಎಂದು ಕೆಣಕಿದರು. ಈ ಹಿಂದೆ ಡಿಎಂಕೆ ಪಕ್ಷದ ನಾಯಕರು ತಮಿಳುನಾಡಿನಲ್ಲಿರುವ ಬಿಹಾರಿಗಳನ್ನು ಅನಕ್ಷರಸ್ಥರು, ಪಾನಿಪುರಿ ಮಾರಾಟಗಾರರು, ಶೌಚಾಲಯ ಸ್ವಚ್ಛಗೊಳಿಸುವವರು ಎಂದು ನಿಂದಿಸಿದ್ದಾರೆ, ಈಗ ನೀವು ಬಿಹಾರಕ್ಕೆ ಹೋಗುತ್ತಿದ್ದೀರಿ, ಬಿಹಾರ ವಿರೋಧಿ ಮನಸ್ಥಿತಿ ಹೊಂದಿರುವ ನೀವುಗಳು ಮತಯಾಚನೆಗೆಂದು ಅಲ್ಲಿಗೆ ಹೋಗುವುದು ನಾಚಿಕೆಗೇಡಿನ ಸಂಗತಿಯಲ್ಲವೇ?ಎಂದು ಪ್ರಶ್ನಿಸಿದರು.

ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ ಅಣ್ಣಾಮಲೈ, ತಮ್ಮ ಪಕ್ಷದ ಮುಖಂಡರ ಹೇಳಿಕೆಯನ್ನು ಬೆಂಬಲಿಸಿ ಮಾತನಾಡಿದ್ದು, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್​​, ಇಂದು ಬಿಹಾರದಲ್ಲಿ ನಮ್ಮ ಬಿಹಾರಿ ಸಹೋದರ ಸಹೋದರಿಯರ ಬಗ್ಗೆ ಅವರ, ಅವರ ಪಕ್ಷದ ಸದಸ್ಯರು ಮತ್ತು ಅವರ ಮೈತ್ರಿಕೂಟದ ಪಾಲುದಾರರ ಅಸಭ್ಯ ಹೇಳಿಕೆಗಳನ್ನು, ಅಪಮಾನದ ನುಡಿಗಳನ್ನು ಹೆಮ್ಮೆಯಿಂದ ಪುನರಾವರ್ತಿಸುವ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.

ಡಿಎಂಕೆ ನಾಯಕರ ವಿವಾದಾತ್ಮಕ ಹೇಳಿಕೆಗಳು

2023 ರಲ್ಲಿ ಚೆನ್ನೈ ಸೆಂಟ್ರಲ್ ಕ್ಷೇತ್ರದ ಸಂಸದ ದಯಾನಿಧಿ ಮಾರನ್, ಬಿಹಾರದ ಹಿಂದಿ ಭಾಷಿಕರು ತಮಿಳುನಾಡಿನಲ್ಲಿ ಮನೆಗಳನ್ನು ನಿರ್ಮಿಸುತ್ತಾರೆ, ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ ಎಂಬ ಹೇಳಿಕೆಯ ವಿಡಿಯೋ ವೈರಲ್​ ಆಗಿತ್ತು.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಮಗ, ಸಚಿವ ಉದಯನಿಧಿ ಸ್ಟಾಲಿನ್, ಕಳೆದ ವರ್ಷ, ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ರೋಗಗಳಿಗೆ ಹೋಲಿಸಿದ್ದರು. ಇದು ಬಿಜೆಪಿ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದ ಹೊರತಾಗಿಯೂ, ಉದಯನಿಧಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಲು ನಿರಾಕರಿಸಿ, ಇದು ದ್ರಾವಿಡ ಐಕಾನ್ ಪೆರಿಯಾರ್ ಅವರ ನಂಬಿಕೆಗಳಿಗೆ ಅನುಗುಣವಾಗಿವೆ ಎಂದಿದ್ದರು.(ಏಜೆನ್ಸೀಸ್​)