ನ್ಯೂಸ್

ಹಾಗೆ ಮಾಡಿದರೆ ಹಣವೂ ಹಾಳು ಬದುಕೂ ಗೋಳು...

ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಮತ್ತೊಂದು ವರುಷ ಗತಿಸಿತು. ಹೊಸ ವರ್ಷವೂ ಬಂದಾಯಿತು. ಕಳೆದು ಹೋದ ವರ್ಷದಲ್ಲಿ ಮಾಡಿದ ಸಾಧನೆ, ಸಾಗಿ ಬಂದ ದಾರಿಯತ್ತ ಒಮ್ಮೆ ಇಣುಕಿ ನೋಡಿದರೆ ತೃಪ್ತಿ ತಂದೀತೇ? - ಬಹುತೇಕರಿಗೆ ಸಿಗುವ ಉತ್ತರ ಇಲ್ಲ ಎಂಬುದೇ. ಕೆಲವೇ ಕೆಲವರಿಗೆ ಹಳೆ ವರ್ಷ ತೃಪ್ತಿಕರ ಎನಿಸಿದರೂ ಅದು ಪೂರ್ಣ ಪ್ರಮಾಣದ್ದಲ್ಲ.

ಇನ್ನು, ಹೊಸ ವರ್ಷದ ಮೊದಲ ದಿನವೇ ಉತ್ತರ ಪ್ರದೇಶದ ಲಖ್ನೋದಲ್ಲಿ ವ್ಯಕ್ತಿಯೊಬ್ಬ ಆಸ್ತಿಗಾಗಿ ಹೆತ್ತ ತಾಯಿ, ನಾಲ್ವರು ಸಹೋದರಿಯರನ್ನು ಭೀಭತ್ಸವಾಗಿ ಕೊಂದ ಘಟನೆ ಕೂಡ ನಡೆಯಿತು. ಹಲವೆಡೆ ಹೊಸ ವರ್ಷಾಚರಣೆ ನಿಮಿತ್ತ ಯುವಕರು ಕುಡಿದ ಮತ್ತಿನಲ್ಲಿ ಅಪಘಾತಕ್ಕೀಡಾದರು. ಇವನ್ನೆಲ್ಲ ನೋಡುತ್ತಿದ್ದರೆ ನಾವು ಎತ್ತ ಸಾಗುತ್ತಿದ್ದೇವೆ?

ಜೀವನದ ಗುರಿಯಾದರೂ ಏನು? ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಎಷ್ಟು ಸರಿ? ರಾಷ್ಟ›ಕ್ಕೆ ಶಾಂತಿ, ಅಹಿಂಸೆ ಮಂತ್ರ ಸಾರಿಹೋದ ಮಹಾತ್ಮಗಾಂಧಿ ಅವರ ಹೆಸರಿನ ಬೆಂಗಳೂರಿನ ರಸ್ತೆಯಲ್ಲಿ ಪಾನಮತ್ತ ಯುವಸಮೂಹದ ಕೇಕೆ ಎಷ್ಟು ನಾಚಿಕೆಗೇಡು? ಏನು ಹೇಳಲು ಹೊರಟಿರುವಿರಿ ನೀವು ಮುಂದಿನ ಪೀಳಿಗೆಗೆ? ಎಂಬೆಲ್ಲ ಪ್ರಶ್ನೆಗಳೇಳುತ್ತವೆ.

ಸೋಷಿಯಲ್ ಡ್ರಿಂಕಿಂಗ್ ಈಗ ಕಾಮನ್ ಎನ್ನುವ ಉಡಾಫೆ ಮಾತು ಇಂದು ಯುವಕರನ್ನು ಎಂಜಿ ರಸ್ತೆಗೆ ತಂದು ನಿಲ್ಲಿಸಿದೆ. ಮದ್ಯದ ಅಮಲಿನಲ್ಲಿ ತೇಲಾಡುವ ಯುವಪೀಳಿಗೆ ನೋಡಿದರೆ ವಿಷಾದಭಾವ ಮೂಡದಿರದು. ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದ ಅದೆಷ್ಟೋ ಯುವಕ ಯುವತಿಯರ ಹೆತ್ತವರು ದೂರದ ಊರಿನಲ್ಲಿ ಮಗ ಅಥವಾ ಮಗಳು ಕೈತುಂಬಾ ಸಂಬಳ ಪಡೆಯುತ್ತಾಳೆ ಎಂಬುದನ್ನೇ ಹಲವರ ಎದುರು ಹೆಮ್ಮೆಯಿಂದ ಹೇಳಿಕೊಂಡು ಸಮರ್ಥನೆ ಗಿಳಿದಿರುತ್ತಾರೆ. ಆದರೆ ಅವರಿಗೇನು ಗೊತ್ತು ಮಕ್ಕಳ ಈ ಆಟಾಟೋಪ?. ಇಂತಹ ವರ್ಷಾಚರಣೆ ಈಗ ಬೆಂಗಳೂರಿನಾಚೆಯೂ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಎರಡನೇ ಹಂತದ ನಗರಗಳು ಸೇರಿದಂತೆ ಗ್ರಾಮೀಣ ಮಟ್ಟದಲ್ಲೂ ಈ ಟ್ರೆಂಡ್ ಶುರುವಾಗಿದೆ. ವರ್ಷಾಚರಣೆ ಹಿಂದಿನ ದಿನವೇ 309 ಕೋಟಿ ಮದ್ಯದ ವಹಿವಾಟು ಎಂಬ ಅಂಕಿ ಅಂಶ ನೋಡಿದರೆ ಗೊತ್ತಾಗುತ್ತದೆ ಮದಿರೆಯ ಮತ್ತು.

ಈಗಂತೂ ಹೊಸ ವರ್ಷಾಚರಣೆ ಎಂದರೆ ವಯಸ್ಸಿನ ಭೇದಭಾವವಿಲ್ಲದೇ ಎಲ್ಲರೂ ಪಾನಮತ್ತರಾಗಿ ಡಾನ್ಸ್ ಮಾಡುವುದು ಎಂಬುದೇ ಪ್ರತಿಷ್ಠೆಯ ವಿಷಯವಾಗಿದೆ. ಕುಡಿಯದವನೇ ಮೂರ್ಖ ಎನ್ನುವ ನಿರ್ಧಾರಕ್ಕೆ ಬಂದಂತಿದೆ. ‘ಏನ್ ಗುರು ನ್ಯೂ ಇಯರ್ ಪಾರ್ಟಿ ಮಾಡಲ್ವಾ? ಎಣ್ಣೆ ಗಿಣ್ಣೆ ಹಾಕಲ್ವಾ? ಥೂ ನಿಂದು ಒಂದೂ ಜನ್ಮಾನಾ?’ ಎಂದು ಹೀಗಳೆಯುವ ಸ್ನೇಹಿತರ ಮಾತಿನಿಂದ ರೊಚ್ಚಿಗೆದ್ದು ಪಾರ್ಟಿಗೆ ಮುಂದಾಗುವ ಯುವಕರಿಗೇನೂ ಕೊರತೆಯಿಲ್ಲ. ಸಮಾಜ ಆಧುನಿಕತೆಯ ಹೆಸರಲ್ಲಿ ಇಂದು ಸ್ವೇಚ್ಛಾಚಾರಕ್ಕೆ ಇಳಿದಿದೆ. ಎಲ್ಲವೂ ಮುಕ್ತವಾಗಿ ನಡೆಯುತ್ತಿದೆ. ಶಿಸ್ತಿನ ಚೌಕಟ್ಟು

ಮೀರಿದೆ. ಹಾಗಿದ್ದರೆ ನಾವು ತುಳಿದಿರುವ ಮತ್ತು ಸಾಗುತ್ತಿರುವ ಹಾದಿ ಸರಿಯೇ? ಎಂಬುದನ್ನು ಒಮ್ಮೆ ಗಂಭೀರವಾಗಿ ಅವಲೋಕಿಸಿದರೆ ಸಿಗುವ ಉತ್ತರ ಖಂಡಿತವಾಗಿಯೂ ‘ಸರಿಯಲ್ಲ’ ಎಂಬುದೇ. ಮೊದಲನೆಯದಾಗಿ ಜನವರಿ ಒಂದರ ಹೊಸ ವರ್ಷ ನಮ್ಮ ಭಾರತೀಯರ ಹೊಸ ವರ್ಷ ಅಲ್ಲವೇ ಅಲ್ಲ. ಮೇಲಾಗಿ ಇದು ಇಂಗ್ಲಿಷ್ ಕ್ಯಾಲೆಂಡರ್ ಬದಲಾಗುವ ವಿಷಯವಷ್ಟೇ. ಇರಲಿ ಅದನ್ನೆಲ್ಲ ಮರೆತು ಇದನ್ನು ಸ್ವಾಗತಿಸೋಣ. ಆದರೆ ಕುಡಿತ ಅನಿವಾರ್ಯ ಅಲ್ಲವಲ್ಲ. ಸಹಜವಾಗಿ ಮನೆಮಂದಿ ಜತೆ ಕೂಡಿಕೊಂಡು ಸಹಭೋಜನ ಮಾಡಿ ಆಚರಿಸಬಹುದಲ್ಲವೇ? ಇಂದು ಸಲ್ಪ ಪ್ರಮಾಣದಿಂದ ಶುರುವಾಗುವ ಈ ಕುಡಿತ ಕ್ರಮೇಣ ಹಲವು ಪಾರ್ಟಿ,

ಸಂದರ್ಭ, ಸನ್ನಿವೇಶಗಳನ್ನು ತಾನೇ ಸೃಷ್ಟಿಸುತ್ತದೆ. ‘ಏನಾಗಲ್ಲ, ಸ್ವಲ್ಪ ತಗೊ’ ಎಂದು ಹೇಳುವ ಸಮಾನಮನಸ್ಕ ಸ್ನೇಹಿತರ ಮಾತಿಗೆ ‘ಒಲ್ಲೆ’ ಎನ್ನಲಾರದ ಸ್ಥಿತಿಗೆ ಬಂದು ಬಿಡುತ್ತೇವೆ. ಅದರ ಬದಲು ಆರಂಭದಲ್ಲೇ ಅದಕ್ಕೆ ಬ್ರೇಕ್ ಹಾಕುವುದು ಸೂಕ್ತ. ಇದರಿಂದ ವೈಯಕ್ತಿಕವಾಗಿ ಮತ್ತು ಕೌಟುಂಬಿಕವಾಗಿ ಎಲ್ಲರಿಗೂ ಕ್ಷೇಮ.

ಈ ಎಲ್ಲ ವಿದ್ಯಮಾನಗಳನ್ನು ನೋಡಿದಾಗ ನಮ್ಮ ಜೀವನದ ಗುರಿ ಇದಲ್ಲ ಎಂಬ ನಗ್ನಸತ್ಯ ಎಲ್ಲರಿಗೂ ಅದರಲ್ಲೂ ವಿಶೇಷವಾಗಿ ಯುವಪೀಳಿಗೆಗೆ ಅರ್ಥವಾಗಬೇಕು. ಹಿರಿಯ ಸಾಧಕರ ಜೀವನ ಅರಿಯಬೇಕು. ಅದೆಷ್ಟೋ ಕಷ್ಟಕೋಟಲೆಗಳ ಮಧ್ಯೆ ಏನೂ ಸೌಲಭ್ಯಗಳಿಲ್ಲದಿದ್ದಾಗೂ ಸಾಧನೆಯ ಶಿಖರ ಏರಿದ ಮಹನೀಯರ ನಡೆನುಡಿ ನಮಗೆ ಆದರ್ಶವಾಗಬೇಕು.

ಬದುಕಿನ ಗುರಿ ಬಗ್ಗೆ ಸ್ಪಷ್ಟತೆ ಇರಬೇಕು. ಆರ್ಥಿಕ ಸದೃಢತೆಯ ಶಕ್ತಿ ಈ ರೀತಿ ಪೋಲಾಗಬಾರದು. ಸಮಾಜದಲ್ಲಿ ಅದೆಷ್ಟೋ ಜನ ಇಂದಿಗೂ ಶಿಕ್ಷಣ ಪಡೆಯಲಾಗದ ಸ್ಥಿತಿಯಲ್ಲಿದ್ದಾರೆ. ಅವರ ನೆರವಿಗೆ ಕೈ ಚಾಚಿದರೆ ಅದು ಜೀವನದ ಸಾರ್ಥಕತೆ. ಅದರ ಬದಲು ದುಡಿದ ಹಣದಲ್ಲಿ ಹೀಗೆ ಕುಡಿದು ಮೋಜು ಮಸ್ತಿ ಮಾಡಿದರೆ ಹಣವೂ ಹಾಳು ಆರೋಗ್ಯವೂ ಹೋಳು ಬದುಕೂ ಗೋಳು. ಇದು ಮನದಟ್ಟಾದರೆ ಸಾಕು.