ನ್ಯೂಸ್

ರೈಲಿನಲ್ಲಿ ಪ್ರಯಾಣಿಸಲಿದ್ದೀರಾ..? ಹಾಗಿದ್ದರೆ ಇದು ತಪ್ಪದೇ ನಿಮ್ಮ ಜತೆ ಇರಲಿ..

ಬೆಂಗಳೂರು: ಇದು ರೈಲಿನಲ್ಲಿ ಪ್ರಯಾಣಿಸಲಿರುವವರ ಗಮನಕ್ಕೆ. ನೀವು ರೈಲಿನಲ್ಲಿ ಸಂಚರಿಸುವುದಿದ್ದರೆ ಈ ಒಂದು ಮುನ್ನೆಚ್ಚರಿಕೆಯನ್ನು ವಹಿಸುವುದು ಅತ್ಯಗತ್ಯ. ಇಲ್ಲದಿದ್ದರೆ ದಂಡ ತೆರಬೇಕಾದ್ದು ಅನಿವಾರ್ಯವಾಗುತ್ತದೆ ಎಂದು ರೈಲ್ವೆ ಇಲಾಖೆ ಮುನ್ಸೂಚನೆ ನೀಡಿದೆ. ಕರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈಲು ಪ್ರಯಾಣದ ವೇಳೆ ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಕರೊನಾ ಸೋಂಕು ಹರಡುವುದನ್ನು ತಡೆಯಲು ದೇಶದೆಲ್ಲೆಡೆ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಕಳೆದ ಕೆಲವು ದಿನಗಳಿಂದ ವೈರಸ್‌ನ ಎರಡನೇ ಅಲೆಯ ಪ್ರಭಾವ ಹೆಚ್ಚಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಮಾಸ್ಕ್ ಧರಿಸದವರ ವಿರುದ್ಧ ಕ್ರಮಕ್ಕೆ ನಿರ್ಧರಿಸಲಾಗಿದೆ. ಅದರಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಬರುವವರಿಗೆ ದಂಡ ವಿಧಿಸಲಾಗುತ್ತಿದೆ.

ಅದೇ ರೀತಿ ಇದೀಗ ರೈಲು ನಿಲ್ದಾಣದ ಜತೆಗೆ ರೈಲಿನಲ್ಲಿ ಪ್ರಯಾಣಿಸುವಾಗಲೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ರೈಲು ಪ್ರಯಾಣಿಕರು ಮಾಸ್ಕ್ ಧರಿಸದಿದ್ದರೆ ಭಾರತೀಯ ರೈಲ್ವೆ ನಿಯಮ 2012ರ ಅಡಿಯಲ್ಲಿ 500 ರೂ. ದಂಡ ವಿಧಿಸಲಾಗುವುದು. ಅದರ ಜತೆಗೆ ಪ್ರಯಾಣಿಕರು ನಿಲ್ದಾಣ ಮತ್ತು ರೈಲಿನೊಳಗೆ ವ್ಯಕ್ತಿಗತ ಅಂತರ ಕಾಪಾಡಬೇಕು ಎಂದು ತಿಳಿಸಲಾಗಿದೆ.