ಪುದುಚೇರಿ: ಯುವ ಜನಾಂಗವು ಎನ್ಡಿಎಗೆ ಮತ ಚಲಾಯಿಸಿದರೆ ನಮ್ಮ ಸರ್ಕಾರವು ನಿರುದ್ಯೋಗವನ್ನು ಶೇ. 40ಕ್ಕಿಂತ ಕಡಿಮೆ ಮಾಡುತ್ತದೆ ಎಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಅಮಿತ್ ಷಾ ಹೇಳಿದರು.
ಸಾರ್ವತ್ರಿಕ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಕೇಂದ್ರಾಡಳಿ ಪ್ರದೇಶ ಪುದುಚೇರಿ ಪ್ರವಾಸದಲ್ಲಿರುವ ಅಮಿತ್ ಷಾ ಅವರು ಇಂದು ಕಾರೈಕಲ್ನಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಹಿಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದ ಷಾ, ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಸಣ್ಣತನದ ರಾಜಕೀಯವನ್ನು ಪ್ರದರ್ಶಿಸಿತು ಎಂದು ಕಿಡಿಕಾರಿದರು.
ಮುಂದಿನ ಬಾರಿ ಪುದುಚೇರಿಯಲ್ಲಿ ಎನ್ಡಿಎ ಸರ್ಕಾರ ರಚನೆ ಮಾಡಲಿದೆ. ಕೇವಲ ಪುದುಚೇರಿ ಮಾತ್ರವಲ್ಲ, ಇಡೀ ದೇಶದಲ್ಲಿ ಎನ್ಡಿಎ ಬರಲಿದೆ. ಅನೇಕ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರಲಿದ್ದಾರೆ. ಏಕೆಂದರೆ ಅರ್ಹತೆಗೆ ಕಾಂಗ್ರೆಸ್ನಲ್ಲಿ ಬೆಲೆ ಇಲ್ಲ ಎಂದರು.
ಕೇವಲ 30 ವಿಧಾನಸಭೆ ಸ್ಥಾನಗಳನ್ನು ಪುದುಚೇರಿ ಹೊಂದಿದೆ. ಏಪ್ರಿಲ್ನಲ್ಲಿ ಕೇವಲ ಒಂದು ಹಂತದಲ್ಲಿ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳ ಪ್ರಚಾರ ಭರಾಟೆ ಜೋರಾಗಿದೆ. ಕೆಲವು ದಿನಗಳ ಹಿಂದಷ್ಟೇ ನಾರಾಯಣಸಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುಮತ ಕೊರತೆಯಿಂದ ಕುಸಿಯಿತು. ಸದ್ಯ ಪುದುಚೇರಿ ರಾಷ್ಟ್ರಪತಿ ಆಳ್ವಿಕೆಯಲ್ಲಿದೆ. (ಏಜೆನ್ಸೀಸ್)