ನ್ಯೂಸ್

ಮೌಢ್ಯವೆಂಬ ಪೊರೆಯು ಕವಿದಿದ್ದರೆ ಸಾರ್ಥಕತೆ ಅರ್ಥವಾಗದು

ಬರಿಯ ಬುದ್ಧಿವಿಮರ್ಶೆಗರಿದು ಜೀವನತತ್ತ್ವ|

ಪರಿಶೋಧಿಸುವರಾರು ಬುದ್ಧಿ ಋಜುತೆಯನು?||

ಸ್ಪುರಿಸುವುದೆಂದೊ ತಾನೇ ಮಿಂಚುಬಳ್ಳಿವೊಲು|

ಪರತತ್ತ್ವ ಮನದೊಳಗೆ-ಮಂಕುತಿಮ್ಮ||539||

ಕೇವಲ ಬುದ್ಧಿಶಕ್ತಿಯಿಂದಷ್ಟೇ ಜೀವನತತ್ತ್ವವನ್ನು ಅರಿತುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಬುದ್ದಿಯ ಸತ್ಯಾಸತ್ಯತೆಯನ್ನು ಪರಿಶೋಧಿಸುವವರು ಯಾರು? ಮತ್ತು ಹೇಗೆ? ಪರತತ್ತ್ವವು ಮನುಜ ಮನದೊಳಗೆ ಮಿಂಚಿನ ಬಳ್ಳಿಯ ಹಾಗೆ ಎಂದೋ ಒಂದು ದಿನ ಸ್ಪುರಿಸುತ್ತದೆ ಎನ್ನುತ್ತದೆ ಈ ಕಗ್ಗ. ಸದಾ ಬದಲಾವಣೆಗೆ ಒಳಗಾಗುವ ಜಗತ್ತು ಮತ್ತು ಜಗತ್ತನ್ನು ಕ್ರಿಯಾಶೀಲವಾಗಿಸುವ ಜೀವ ಇವುಗಳ ನಡುವೆ ಇರುವ ಬಾಂಧವ್ಯವೇನು? ಇವೆರಡೂ ಹೇಗೆ ಸಂಯೋಜಿತವಾಗಿದೆ? ನಿಯಂತ್ರಿಸಲ್ಪಟ್ಟಿದೆ? ಅವ್ಯಕ್ತ ಶಕ್ತಿಯ ಲೀಲೆಯಂತೆ ತೋರುವ ಈ ಜೀವಜಗತ್ತಿನ ಆಟವೇ ಜೀವನತತ್ತ್ವ.

ಜಗತ್ತನ್ನು ಪಂಚೇಂದ್ರಿಯಗಳ ಮೂಲಕ ಮನಸ್ಸು ಗ್ರಹಿಸುತ್ತದೆ. ಹೀಗೆ ಪಡೆದ ಅನುಭವದ ಅರಿವನ್ನು ಬುದ್ದಿಯು ಪರಾಮಶಿಸಿದಾಗ ನಿತ್ಯಸತ್ಯವು ಅಂತರಂಗಕ್ಕೆ ವೇದ್ಯವಾಗುತ್ತದೆ. ಆದರೆ ಸಾಮಾನ್ಯವಾಗಿ ಮನಸ್ಸು; ಜಗದನುಭವಕ್ಕಷ್ಟೇ ಇಂದ್ರಿಯಗಳನ್ನು ಸೀಮಿತವಾಗಿಸುವುದಿಲ್ಲ. ಅವು ನೀಡುವ ಸುಖಾನುಭವಕ್ಕೆ ಮಾರುಹೋಗುತ್ತದೆ. ಜೊತೆಗೆ ಬುದ್ಧಿಯು ಕೂಡಾ ವಿವೇಚನಾ ಶಕ್ತಿಯನ್ನು ಕಳೆದುಕೊಂಡು ಮನಸ್ಸಿನ ವಶವಾಗಿ ಮಂಕಾಗುತ್ತದೆ. ಇದರಿಂದಾಗಿ ನಿತ್ಯಸತ್ಯವನ್ನು ಗ್ರಹಿಸುವುದಿರಲಿ, ಆ ಬಗೆಯ ಜ್ಞಾನವೂ ಮೂಡದಂಥ ಸ್ಥಿತಿಯಲ್ಲಿ ವ್ಯಕ್ತಿಯು ನರಳುತ್ತಾನೆ. ಅವನಲ್ಲಿ ತಾಮಸ ಗುಣವು ವಿಜೃಂಭಿಸುತ್ತದೆ.

ಈ ಜೀವನತತ್ತ್ವವು ಅನುಭವ ಪ್ರಧಾನವಾದದದ್ದು. ಇದಕ್ಕೆ ಮತಿಗ್ರಾಹ್ಯತೆಯು ಅತ್ಯಗತ್ಯ. ಬುದ್ಧಿವಂತಿಕೆ ಎಂದರೆ ಗಣಿತ, ವಿಜ್ಞಾನ, ಶಾಸ್ತ್ರಗಳಂಥ ವಿಷಯಗಳಲ್ಲಿ ಮಾಡುವ ಸಾಹಸ, ಸಾಧನೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ಅದು ಮತಿಗೆ ಒದಗಿಸುವ ಮಿತಿ. ವ್ಯಕ್ತಿಯ ಅಂತರಂಗ ಶಕ್ತಿಗಳಾದ ಮನಸ್ಸು, ಸಂಕಲ್ಪ ಮತ್ತು ಸ್ಮರಣೆಗಳನ್ನು ಬುದ್ಧಿಯು ತನ್ನ ಸ್ವಾಧೀನದಲ್ಲಿ ಇರಿಸಿಕೊಳ್ಳಬೇಕು. ಜೊತೆಗೆ ಅವುಗಳ ಸತ್ಯಾಸತ್ಯತೆಯನ್ನು, ದೃಢತೆಯನ್ನು ಪರಾಮಶಿಸಬೇಕು. ಪ್ರಯೋಜನ ಮತ್ತು ಪರಿಣಾಮಗಳ ಬಗೆಗೆ ವಿವೇಚಿಸಬೇಕು. ಹೀಗೆ ವಸ್ತು ಸ್ವರೂಪಜ್ಞಾನವನ್ನು ಬುದ್ಧಿಯು ಸರಿಯಾಗಿ ಗ್ರಹಿಸಬೇಕೆಂದರೆ ಅಂತಃಸ್ಪೂರ್ತಿಯುಂಟಾಗಬೇಕು. ಇದಕ್ಕೆ ವ್ಯಕ್ತಿಯು ಸ್ಥಿತಪ್ರಜ್ಞನಾಗಬೇಕು.

ಜೀವ ಮತ್ತು ಜಗತ್ತಿನ ನಡುವೆ ಗಟ್ಟಿಯಾದ ನಂಟು ಬೆಳೆಯಲು ಮಾಯೆಯು ಕಾರಣವಾಗಿರುತ್ತದೆ. ಇದು ಮತಿಮನಸ್ಸುಗಳನ್ನು ವಿಚಲಿತಗೊಳಿಸುತ್ತದೆ. ಚಪಲ ಚಿತ್ತತೆಯನ್ನು ಸೃಜಿಸಿ ದಿಕ್ಕು ತಪ್ಪಿಸುತ್ತದೆ. ಹಾಗಾಗಿ ಬದುಕೆಂದರೆ ಹೋರಾಟ, ಬಯಕೆಗಳನ್ನು ಬೆನ್ನಟ್ಟುವ ಮಾಯದಾಟ. ವಸ್ತುವನ್ನು ಕಾಣಲು ಅದರ ಮೇಲೆ ಬೆಳಕು ಬೀಳುತ್ತಿರಬೇಕು. ಹೊರಗಷ್ಟೇ ಅಲ್ಲ, ಕಾಣುವ ಕಂಗಳಲ್ಲೂ ಬೆಳಕಿರಬೇಕು. ಬುದ್ಧಿಯು ಎಲ್ಲೆಡೆಯೂ ವ್ಯಾಪಿಸಿರುವ ಪರವಸ್ತುವನ್ನು ಕಾಣಬೇಕಾದರೆ ಎದುರಿನಿಂದಲೇ ಬೆಳಕು ಬರಬೇಕು. ಜೊತೆಗೆ ಒಳಗಣ್ಣಿಗೂ ಕಾಣುವ ಬಲವು ಸಿದ್ಧಿಸಬೇಕು. ಈಶ್ವರಾನುಗ್ರಹವಿದ್ದರಷ್ಟೇ ಇದು ಸಾಧ್ಯ. ಜೀವನದಲ್ಲಿ ಅಂತಃಸ್ಪೂರ್ತಿಯನ್ನು ಉಂಟುಮಾಡುವುದು, ತನ್ನನ್ನು ಅರಿಯುವ ಮನೋಬುದ್ಧಿಯನ್ನು ಕರುಣಿಸುವುದು ಪರಮಾತ್ಮನ ನಿರ್ಧಾರ. ಭಕ್ತಿ, ಉಪಾಸನೆ, ಶರಣಾಗತಿಯಿಂದ ಮಾತ್ರ ಜೀವನತತ್ತ್ವವನ್ನು ಮನನ ಮಾಡಿಕೊಳ್ಳಲು ಸಾಧ್ಯವಿದೆ. ಭಕ್ತಿ ಮತ್ತು ಜ್ಞಾನವೆರಡೂ ಮುಖದ ಮೇಲಿನ ಕಣ್ಣುಗಳಿದ್ದಂತೆ. ಮೌಢ್ಯವೆಂಬ ಪೊರೆಯು ಕವಿದಿದ್ದರೆ ಜೀವನದ ನಿಜವಾದ ಸಾರ್ಥಕತೆಯನ್ನು ವ್ಯಕ್ತಿಯು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಲೋಕದಲ್ಲಿ ಎಲ್ಲೆಲ್ಲಿ ಮಹತ್ತ್ವವಿದೆಯೋ, ಸತ್ತಾ್ವತಿಶಯವಾದುದು ಇದೆಯೋ, ಅಮಿತಾನಂದವಿದೆಯೋ ಅಲ್ಲೆಲ್ಲಾ ಅವ್ಯಕ್ತ ಶಕ್ತಿಯು ನೆಲೆಯಾಗಿರುವುದನ್ನು ಅನುಭವಿಸುತ್ತಾನೆ. ಹೀಗಾದಾಗ ಜೀವನತತ್ತ್ವವನ್ನು ತಿಳಿಯಬೇಕು ಎನ್ನುವ ಹಂಬಲವು ಕುಡಿಯೊಡೆಯುತ್ತದೆ.

ಹೀಗೆ ಜೀವನತತ್ತ್ವದ ಸತ್ಯಾಸತ್ಯತೆಯನ್ನು ಗ್ರಹಿಸುವ ಸಾಮರ್ಥ್ಯ, ಗ್ರಹಿಸಬೇಕೆಂಬ ಅಂತಃಪ್ರೇರಣೆಯು ಎಂದೋ ಒಂದು ದಿನ ಮಿಂಚಿನ ಹಾಗೆ ಸ್ಪುರಣೆಯಾಗುತ್ತದೆ. ಅದಕ್ಕಾಗಿ ಸತ್ಪಾತ್ರರಾಗಬೇಕು. ಕಾಮಕ್ರೋಧಮೋಹಗಳೇ ಮೊದಲಾದ ಆರು ಬಗೆಯ ಹಗೆಗಳಿಗೆ ವಶರಾಗದೆ ಸತ್ಯವನ್ನು ಅರಿಯುವ ಹಂಬಲವನ್ನು ಬೆಳೆಸಿಕೊಂಡಾಗ ಬದುಕು ಬೆಳಕಾಗುತ್ತದೆ. ಈ ನಿಟ್ಟಿನಲ್ಲಿ ಮಾಡುವ ಕಿಂಚಿತ್ ಪ್ರಯತ್ನವೂ ವ್ಯರ್ಥವಲ್ಲ. ಅಂತರಂಗದಲ್ಲಿ ಪರತತ್ತ್ವವನ್ನು ಗ್ರಹಿಸುವ ಅಂತರ್ಜ್ಞಾನವು ಸ್ಪುರಿಸಬೇಕಾದರೆ ವ್ಯಕ್ತಿಯು ತನ್ನನ್ನು ತಾನು ಶೋಧಿಸಬೇಕು, ತನ್ನ ದೌರ್ಬಲ್ಯಗಳನ್ನು ತಿಳಿದುಕೊಂಡು ಅದನ್ನು ಮೀರಲು ಯತ್ನಿಸಬೇಕು. ತನ್ನನ್ನು ಅರಿಯಲು ಯತ್ನಿಸಿದರಷ್ಟೇ ಪರತತ್ತ್ವದರಿವು.