ನ್ಯೂಸ್

ಆಂತರ್ಯದ ಶೋಧ ನಿರಂತರವಾದರೆ ಪರಬ್ರಹ್ಮ ಗೋಚರವಾದೀತು!

ಮೋಹನ್​ ಶೆಟ್ಟಿ

ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ|

ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ||

ಒಸೆದೇತಕವನೀಯನೆಮಗೊಂದು ನಿಜಕುರುಹ|

ನಿಶೆಯೊಳುಡುಕರದವೊಲು?-ಮಂಕುತಿಮ್ಮ||39||

ಸುಳ್ಳನ್ನು ಸುಳ್ಳಾಗಿಸಿ ಸತ್ಯವನ್ನು ನೀನು ಕಾಣುವ ಹಾಗಾಗಲಿ ಎಂದು ಪರಬ್ರಹ್ಮನು ಮುಸುಕನ್ನು ಹಾಕಿಕೊಂಡಿದ್ದಾನೆ ಎನ್ನುವೆಯಾದರೆ, ಇರುಳಿನಲ್ಲಿ ಮಿನುಗುವ ನಕ್ಷತ್ರ ದಂತೆಯಾದರೂ, ಪರಬ್ರಹ್ಮನು ತನ್ನದೊಂದು ನಿಜ ಕುರುಹನ್ನು ಮೆಚ್ಚಿಯೋ, ಅನುಗ್ರಹಿಸಿಯೋ ಯಾಕೆ ನಮಗೆ ತೋರುವುದಿಲ್ಲ ಎಂದು ಪ್ರಶ್ನಿಸುತ್ತದೆ ಈ ಕಗ್ಗ.

ಮನೆಯ ಅಜ್ಜಿಯು ಮೊಮ್ಮಕ್ಕಳೊಂದಿಗೆ ಸೇರಿ ಕಣ್ಣಾಮುಚ್ಚಾಲೆಯಾಟ ಆಡುತ್ತಾಳೆ. ಮಕ್ಕಳ ಹಾಗೆಯೇ ತಾನೂ ಎಲ್ಲೆಲ್ಲೋ ಅಡಗಿಕೊಳ್ಳುತ್ತಾಳೆ. ಮಗುವಿಗೆ ಕಂಡುಹಿಡಿದ ಖುಷಿ ಸಿಗಲೆಂದು ತಾನಿರುವ ಜಾಗದ ಸೂಚನೆಯನ್ನು ಸದ್ದು ಮಾಡಿಯೋ, ಅಲುಗಾಡಿಯೋ ಸೂಚಿಸುತ್ತಾಳೆ. ಅಜ್ಜಿಯನ್ನು ಕಂಡುಹಿಡಿದ ಮಗುವಿಗೆ ಇನ್ನಿಲ್ಲದಷ್ಟು ಸಂತೋಷವಾಗುತ್ತದೆ. ಅದನ್ನು ನೋಡಿ ಅಜ್ಜಿಗೆ ನೂರ್ಮಡಿ ಸಂತೋಷವಾಗುತ್ತದೆ. ಕೂಡು ಕುಟುಂಬದಲ್ಲಿ ಸಾಮಾನ್ಯವಾಗಿರುವ ದೃಶ್ಯವಿದು. ಅಜ್ಜಿ ಬಚ್ಚಿಟ್ಟುಕೊಂಡಿದ್ದಾರೆ ಎನ್ನುವುದನ್ನು ಮಗು ತಿಳಿದಿದೆ. ತನ್ನ ಹುಡುಕಾಟದಲ್ಲಿ ಮಗುವು ಬಳಲುವುದು ಬೇಡವೆಂದು ಅಜ್ಜಿಯು ತನ್ನ ಸುಳಿವನ್ನು ಬಿಟ್ಟುಕೊಡುತ್ತಾಳೆ. ರಸಮಯ ಅನುಭವವು ಸಿಹಿನೆನಪನ್ನು ಉಳಿಸಿಕೊಂಡು ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.

ಪರಬ್ರಹ್ಮನೂ ಅವ್ಯಕ್ತನಾಗಿದ್ದಾನೆ, ಯಾರಿಗೂ ಕಾಣದಂತೆ ಮುಸುಕು ಹಾಕಿಕೊಂಡು ಅವಿತಿದ್ದಾನೆ ಎನ್ನುತ್ತಾರೆ. ಹಾಗಾದರೆ ಎಲ್ಲಿ ಬಚ್ಚಿಟ್ಟುಕೊಂಡಿದ್ದಾನೆ? ಒಂದಿನಿತೂ ಸುಳಿವಿಲ್ಲವೆಂದ ಮೇಲೆ ನಿಜವಾಗಿಯೂ ಅವನು ಇದ್ದಾನೋ ಇಲ್ಲವೋ? ಹುಡುಕಿದರೆ ಸಿಗಬಹುದೇ? ಅಥವಾ ವ್ಯರ್ಥ ಪ್ರಯತ್ನವಾದೀತೋ? - ಇವು ಪರಮಾತ್ಮನ ಬಗೆಗೆ ಜಿಜ್ಞಾಸುಗಳನ್ನು ಕಾಡುವ ಪ್ರಶ್ನೆಗಳು. ತನ್ನನ್ನು ಎಡೆಬಿಡದೆ ಅರಸುವ ಜನರ ತಳಮಳ, ಸತತ ಪ್ರಯತ್ನ, ಸಿಗದೆ ಇದ್ದಾಗ ಪಡುವ ಬೇಸರ-ನಿರಾಸೆ, ಭ್ರಮನಿರಸನದ ಸ್ಥಿತಿಗಳನ್ನು ಪರಬ್ರಹ್ಮನು ಅವಿತಿರುವಲ್ಲಿಂದಲೇ ನೋಡುತ್ತಾನಲ್ಲವೇ? ಕೊನೆಯಪಕ್ಷ ಮರುಕದಿಂದಲೋ, ಮೆಚ್ಚುಗೆಯಿಂದಲೋ ತನ್ನ ಇರುವಿಕೆಯ ಸುಳುಹನ್ನು ನೀಡಬಾರದೆ? ಮೋಡದ ಹಿಂದೆ ಮರೆಯಾಗುಳಿವ ನಕ್ಷತ್ರಗಳು ಮಿನುಗಿ ಇರುಳ ದಾರಿಯಲ್ಲಿ ನಡೆವ ಪಥಿಕನಿಗೆ ಆಸರೆಯಾಗುತ್ತವೆ. ಮಿನುಗು ತಾರೆಯಂತೆ, ಅರೆ ಕ್ಷಣಕ್ಕಾದರೂ ಪರಬ್ರಹ್ಮನು ವ್ಯಕ್ತನಾಗಬಾರದೆ? ತಾನಿರುವುದರ ಅನುಭವವನ್ನು ನೀಡಬಾರದೆ?. ಅಧ್ಯಾತ್ಮದ ಹಾದಿಯಲ್ಲಿ ನಿಧಾನವಾಗಿ ನಡೆಯ ತೊಡಗಿರುವ ಸಾಧಕನು ಹೀಗೆ ಪ್ರಶ್ನಿಸಿಕೊಳ್ಳುತ್ತಾನೆ.

ಮನುಜ ಜೀವನದ ಮೂಲ ಉದ್ದೇಶವು ಪರಬ್ರಹ್ಮನನ್ನು ಸೇರುವುದು. ಪ್ರತಿಯೊಂದು ಹಂತದಲ್ಲೂ ತನ್ನನ್ನು ತಾನು ಪರಿಷ್ಕರಿಸಿಕೊಂಡು, ಕರ್ಮದೋಷಗಳ ಹೊರೆಯಿಂದ ಮುಕ್ತನಾಗಿ ಪರಬೊಮ್ಮನನ್ನು ಸೇರುವುದು ಜೀವಾತ್ಮದ ಗುರಿ. ಪುಟ್ಟ ಹನಿಯೊಂದು ತೊರೆ, ನದಿಗಳ ದಾರಿಯಲ್ಲಿ ಸಾಗಿ ಅನಂತ ಸಾಗರವನ್ನು ಸೇರುವಂತೆ ಜೀವಾತ್ಮವೂ ವಿವಿಧ ಅವಸ್ಥೆಗಳನ್ನು ದಾಟಿ ಬರುತ್ತದೆ. ಪುಣ್ಯ ಸಂಚಯ, ಋಣ ಶೇಷ, ಕರ್ಮದೋಷಗಳಿಗೆ ಅನುಸಾರವಾಗಿ ವಿಧಾತನು ಜೀವನವನ್ನು ಚಿತ್ರಿಸುತ್ತಾನೆ. ಇದರಿಂದಾಗಿ ಬದುಕಿನುದ್ದಕ್ಕೂ ಅನಿರೀಕ್ಷಿತಗಳನ್ನು ಎದುರಿಸಬೇಕಾಗುತ್ತದೆ. ಮನುಜನಿಗೆ ತನ್ನ ಜೀವನ, ಸುತ್ತಲಿನ ಪರಿಸರ, ಸಂಭವಿಸುವ ಘಟನೆಗಳೆಲ್ಲವೂ ಬೆರಗು ಹುಟ್ಟಿಸುತ್ತದೆ, ಜಗತ್ತು ಕೌತುಕಮಯವೆನ್ನಿಸುತ್ತದೆ.

ಈ ಕುತೂಹಲ ಮತ್ತು ಕಾರಣದ ಅನ್ವೇಷಣೆಯಲ್ಲಿ ಕೆಲವರಿಗೆ ಏನೂ ಅರ್ಥವಾಗುವುದಿಲ್ಲ. ಕಣ್ಣಿಗೆ ಕಾಣುವುದಷ್ಟೇ ಸತ್ಯ ಎಂದು ವಾದಿಸುತ್ತಾರೆ. ನಾನು ಎನ್ನುವ ಹಮ್ಮು, ನನ್ನದು ಎನ್ನುವ ಮೋಹವು ಅವರನ್ನು ನಾಸ್ತಿಕರನ್ನಾಗಿಸುತ್ತದೆ. ಇಲ್ಲ ಎಂದು ನಿರಾಕರಿಸುತ್ತಲೇ ದೇವರನ್ನು ಮತ್ತೆಮತ್ತೆ ನೆನೆಯುತ್ತಾರೆ, ಶೋಧಿಸುತ್ತಾರೆ. ಇನ್ನು ಕೆಲವರು ಹಿರಿಯರು ತೋರಿದಂತೆ, ನುಡಿದಂತೆ ಸತ್ಯ-ಸುಳ್ಳುಗಳನ್ನು ಹುಡುಕದೆ ನಂಬಿ ನಡೆಯುತ್ತಾರೆ. ಆದರೆ ಮತ್ತೆ ಕೆಲವರು ಜಗನ್ಮೂಲವನ್ನು ನಿರಂತರವಾಗಿ ಶೋಧಿಸುತ್ತಿರುತ್ತಾರೆ. ಅವ್ಯಕ್ತವಾಗಿರುವ ಸತ್ಯವು ಸಣ್ಣದೊಂದು ಕುರುಹನ್ನೂ ತೋರ್ಪಡಿಸದೆ ಯಾಕಿದೆ ಎಂದು ಯೋಚಿಸುತ್ತಾರೆ.

ಕಂಗಳು ಮುಚ್ಚಿದ್ದರೆ ಬೆಳಕನ್ನು ಕಾಣಲು ಸಾಧ್ಯವೇನು? ಕಣ್ತೆರೆದರಷ್ಟೇ ಬೆಳಕು. ಕಂಗಳಿಗೆ ಅವ್ಯಕ್ತವಾಗಿರುವ ಪರಬ್ರಹ್ಮವು ಅಂತರಂಗಕ್ಕೆ ವೇದ್ಯವಾಗಬಲ್ಲುದು. ಒಂದರೆ ಕ್ಷಣ ಈ ಅರಿವು ಗೋಚರಿಸಿದರೂ ಸಾಕು ಬಾಹ್ಯ ಜಗತ್ತು ಪರಬ್ರಹ್ಮದ ಆವಾಸ ಸ್ಥಾನವಾಗಿ ಗೋಚರಿಸುತ್ತದೆ. ಲೋಕ ವಿಸ್ಮಯಗಳಲ್ಲಿ, ಸೌಂದರ್ಯಗಳಲ್ಲಿ ಆ ಪರಾತ್ಪರ ಶಕ್ತಿಯೇ ಸ್ಥಿತವಾಗಿರುವುದು ಅರ್ಥವಾಗುತ್ತದೆ.

ಹಾಗಾಗಿ ಸದಾ ಬದಲಾಗುವ ಜೀವಜಗತ್ತಿನ ತುಂಬಾ ಪರಬ್ರಹ್ಮ ಸ್ವರೂಪವಿದೆ. ಆ ಚೈತನ್ಯದ ದರ್ಶನಕ್ಕಾಗಿ, ಅನುಭೂತಿಯನ್ನು ಪಡೆಯುವುದಕ್ಕಾಗಿ ಮಾಡುವ ಕಿಂಚಿತ್ ಪ್ರಯತ್ನ ಕೂಡ ಜೀವನೋದ್ಧಾರಕ್ಕೆ ಕಾರಣವಾಗುತ್ತದೆ. ಆಂತರ್ಯವನ್ನು ವೀಕ್ಷಿಸುವ, ಶೋಧಿಸುವ ಕಾರ್ಯವು ನಿರಂತರವಾದರೆ ಎಲ್ಲೆಡೆಯೂ ಪರಬ್ರಹ್ಮನಿರುವುದು ಗೋಚರವಾಗಬಹುದು.