ನ್ಯೂಸ್

ಬೇಕಿದ್ದರೆ ಸಿನಿಮಾಜೀವನಕ್ಕೇ ಗುಡ್​ಬೈ ಹೇಳ್ತಾರಂತೆ ಕಮಲಹಾಸನ್​; ಕಾರಣ ಇಲ್ಲಿದೆ...

ಚೆನ್ನೈ: ತಮ್ಮದೇ ಒಂದು ಪಕ್ಷ ಕಟ್ಟಿಕೊಂಡು ರಾಜಕಾರಣಕ್ಕೆ ಇಳಿದಿರುವ ನಟ ಕಮಲಹಾಸನ್​ ಇದೀಗ ರಾಜಕೀಯ ಚಟುವಟಿಕೆಗಳಲ್ಲಿ ಚುರುಕಾಗಿದ್ದು, ಯಾವುದೇ ಕಾರಣಕ್ಕೂ ರಾಜಕಾರಣದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಸಿನಿಮಾ ಜತೆಜತೆಗೆ ಮಕ್ಕಳ್ ನೀತಿ ಮಯಮ್​ (ಎಂಎನ್​ಎಂ) ಪಕ್ಷವನ್ನು ಸ್ಥಾಪಿಸಿ, ರಾಜಕೀಯದಲ್ಲೂ ತೊಡಗಿಸಿಕೊಂಡಿರುವ ಕಮಲಹಾಸನ್​, ತಮಿಳುನಾಡಿನಲ್ಲಿ ನಡೆಯಲಿರುವ ಚುನಾವಣಾ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಕೆಲವರು ನಾನು ರಾಜಕೀಯದಿಂದ ಕಾಣೆಯಾಗಿ ಮತ್ತೆ ಸಿನಿಮಾಗೆ ಪ್ರವೇಶಿಸುತ್ತೇನೆ ಎಂಬುದಾಗಿ ವ್ಯಂಗ್ಯವಾಡುತ್ತಿದ್ದಾರೆ. ಆದರೆ ನಾನು ರಾಜಕೀಯದಿಂದ ಕಾಣೆಯಾಗುತ್ತೇನೋ ಇಲ್ಲವೋ ಎಂಬುದನ್ನು ನಿರ್ಧರಿಸುವುದು ಜನತೆ ಎಂದಿರುವ ಕಮಲಹಾಸನ್​, ತಮ್ಮ ರಾಜಕೀಯ ಜೀವನಕ್ಕೆ ತೊಂದರೆ ಆಗುವುದಿದ್ದರೆ ನಾನು ಸಿನಿಮಾ ಜೀವನಕ್ಕೇ ವಿದಾಯ ಹೇಳಿ ರಾಜಕೀಯದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂಬುದಾಗಿಯೂ ಹೇಳಿದ್ದಾರೆ. ಸದ್ಯಕ್ಕೆ ಬಾಕಿ ಇರುವ ಎಲ್ಲ ಸಿನಿಮಾಗಳನ್ನು ಮುಗಿಸಲಿದ್ದೇನೆ. ಆ ನಂತರ ರಾಜಕೀಯಕ್ಕೆ ಸಿನಿಮಾ ಅಡ್ಡಿ ಆಗುವುದಾದರೆ ಸಿನಿಮಾಜೀವನಕ್ಕೇ ವಿದಾಯ ಹೇಳುತ್ತೇನೆ ಎಂದಿದ್ದಾರೆ.

ಇನ್ನು ತಾವು ರಾಜಕೀಯಕ್ಕೆ ಪ್ರವೇಶಿಸಿರುವುದು ಐತಿಹಾಸಿಕ ನಿರ್ಧಾರ. ಏಕೆಂದರೆ ಶೇ. 30 ಮಂದಿ ರಾಜಕೀಯದಿಂದ ದೂರವೇ ಉಳಿದಿರುವಾಗ ತಮ್ಮ ಈ ನಿರ್ಧಾರ ಸೂಕ್ತವಾದದ್ದು ಎಂದು ಕಮಲಹಾಸನ್ ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ತಮಗೆ ಕೆಲವು ಬೆದರಿಕೆಗಳು ಬರುತ್ತಿವೆ ಎಂದಿರುವ ಅವರು, ಆ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದಾರೆ.