ನ್ಯೂಸ್

ತಪ್ಪು ಮಾಡಿದ್ದರೆ ತಾನೇ ಎಫ್​ಐಆರ್​ ಆಗುವುದು! ಯಾರಿಗೂ ಕಿರುಕುಳ ನೀಡಿ ಕೇಸ್​ ದಾಖಲಿಸಿಲ್ಲ: ಸಿಎಂ

ಮೋಹನ್​ ಶೆಟ್ಟಿ

ಬೆಂಗಳೂರು: ಇಂದು ಕೊಪ್ಪಳದ ಗಿಣಿಗೇರಾ ಏರ್ ಸ್ಟ್ರಿಪ್​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕ್ರಸ್ಟ್ ಗೇಟ್​ಗಳನ್ನು 50 ವರ್ಷಕ್ಕೆ ಒಮ್ಮೆ ಬದಲಿಸಬೇಕು. 70 ವರ್ಷಗಳಿಂದ ಗೇಟ್​ಗಳು ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಉತ್ತಮ ನಿರ್ವಹಣೆ ಮಾಡಿರುವುದರಿಂದ 70 ವರ್ಷ ಕೆಲಸ ಮಾಡಿದೆ. ಪ್ರಸ್ತುತ ತಜ್ಞರ ಸಮಿತಿ ರಚನೆಯಾಗಿದ್ದು, ಅವರು ವರದಿ ನೀಡಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

"ತುಂಗಭದ್ರ ಜಲಾಶಯ ಮತ್ತೆ ತುಂಬಿದೆ. 101.77 ಟಿಎಂಸಿ ನೀರು ಲಭ್ಯವಿದೆ. ಮುಂಗಾರು ಮತ್ತು ಹಿಂಗಾರು ಬಿತ್ತನೆಗೆ ನೀರು ಸಿಗಲಿದೆ. ಕೊಚ್ಚಿಹೋಗಿದ್ದ 19ನೇ ಕ್ರಸ್ಟ್ ಗೇಟ್​ನ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಶಿವರಾಜ ತಂಗಡಗಿ, ಜಮೀರ್ ಅಹಮದ್ ಖಾನ್ ಅವರು ಸ್ಥಳದಲ್ಲಿಯೇ ಇದ್ದು ದುರಸ್ತಿಗೆ ಕ್ರಮ ವಹಿಸಿದರು. ತಜ್ಞ ಕನ್ನಯ್ಯ ನಾಯ್ಡು ಅವರ ನೇತೃತ್ವದಲ್ಲಿ, ಜಿಂದಾಲ್, ನಾರಾಯಣ್ ಇಂಜಿನಿಯರಿಂಗ್ ಹಾಗೂ ಇಂಜಿನಿಯರ್‌ಗಳು, ಅಧಿಕಾರಿಗಳು ಹಗಲು-ರಾತ್ರಿ ಕೆಲಸ ಮಾಡಿದ್ದರಿಂದ ಆದಷ್ಟು ತ್ವರಿತವಾಗಿ ಗೇಟ್ ಅಳವಡಿಸಲು ಸಾಧ್ಯವಾಯಿತು. ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು. 20ಕ್ಕೂ ಹೆಚ್ಚು ಟಿಎಂಸಿ ನೀರು ಉಳಿಯಿತು" ಎಂದರು.

"ಬೆಳೆಗೆ ನೀರು ಸಿಗುತ್ತದೋ ಇಲ್ಲವೋ ಎಂಬ ರೈತರ ಆತಂಕ ನಿವಾರಣೆಯಾಗಿದೆ. ಹಿಂಗಾರಿನ ಬೆಳೆಗೆ ಯಾವುದೇ ತೊಂದರೆ ಇಲ್ಲ. ಎರಡನೇ ಬೆಳೆಗೆ ನೀರು ಒದಗಿಸಲು ಪ್ರಯತ್ನಿಸಲಾಗುವುದು.101 ಟಿಎಂಸಿ ಲಭ್ಯವಿರುವುದರಿಂದ ನೀರು ಸಿಗಬಹುದು. ನಮ್ಮ ಸರ್ಕಾರವಿದ್ದಾಗ ರಸ್ತೆಗಳ ನಿರ್ಮಾಣ ಮಾಡಿದ್ದೆವು. ಬಿಜೆಪಿ ಕಾಲದಲ್ಲಿ ರಸ್ತೆಗಳಾಗಿಲ್ಲ" ಎಂದು ತಿಳಿಸಿದರು.

"ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ರಸ್ತೆಗಳು ಹಾಳಾಗಿವೆ, ಅದರ ದುರಸ್ತಿ ಮಾಡಿಸಲಾಗುವುದು. ಅರ್ಕಾವತಿ ಬಡಾವಣೆ ಬಗ್ಗೆ ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆದಿದ್ದರೆ ಸರ್ಕಾರ ಈ ಬಗ್ಗೆ ಗಮನಹರಿಸಲಿದೆ. ಪತ್ರ ಸೋರಿಕೆಯಾಗಿದೆ ಎಂಬ ಬಗ್ಗೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ, ರಾಜ್ಯಪಾಲರ ಕಛೇರಿಯಿಂದಲೇ ಈ ಮಾಹಿತಿ ಸೋರಿಕೆಯಾಗಿರಬಹುದು. ಈ ಬಗ್ಗೆ ತನಿಖೆಯಾಗಲಿ. ನಾನೂ ಪತ್ರಿಕೆಯಲ್ಲಿ ಓದಿ ತಿಳಿದಿದ್ದೇನೆ. ರೀ ಡೂ ಮಾಡಿ ಎಂದು ಬಿಡಿಎಗೆ ಸುಪ್ರೀಂ ಕೋರ್ಟ್ ಹೇಳಿದೆ" ಎಂದರು.

"ಮಾಗಡಿಯಲ್ಲಿ ಬಹಳ ಮಂದಿ ಶಾಸಕರು, ರೈತರು ಹಸು ಸಾಕಣೆಯ ವೆಚ್ಚ ಹೆಚ್ಚಾಗಿದ್ದು, ಹಾಲಿನ ದರ ಹೆಚ್ಚಳ ಮಾಡಲು ಒತ್ತಾಯ ಮಾಡಿದರು. ಒಂದು ವೇಳೆ ಹಾಲಿನ ದರ ಹೆಚ್ಚು ಮಾಡಿದರೆ ಅದನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸಬೇಕೆಂದು ಸೂಚಿಸಲಾಗಿದೆ. ನಾವು ಯಾರ ಮೇಲೂ ದ್ವೇಷದ ರಾಜಕಾರಣ ಮಾಡುವುದಿಲ್ಲ. ಅಪರಾಧ ಮಾಡಿ ಎಂದು ನಾವು ಯಾರಿಗೂ ಹೇಳಿಲ್ಲ. ಮುನಿರತ್ನ ಮೇಲೆ ಮೂರು ಪ್ರಕರಣಗಳು ದಾಖಲಾಗಿವೆ. ನಮ್ಮ ಶಾಸಕರು ನನ್ನನ್ನು ಭೇಟಿ ಮಾಡಿ ಎಸ್ಐಟಿ ರಚಿಸಲು ಕೋರಿದರು. ಅವರ ಕೋರಿಕೆಯ ಮೇರೆಗೆ ಸ್ಪಂದಿಸಿ ಎಸ್ಐಟಿ ರಚಿಸಿದ್ದೇವೆ. ತಪ್ಪು ಮಾಡಿದ್ದರೆ ತಾನೇ ಎಫ್ಐಆರ್ ಆಗುವುದು. ನಾವು ಯಾರಿಗೂ ಕಿರುಕುಳ ನೀಡಿ ಕೇಸ್​ ದಾಖಲಿಸಿಲ್ಲ, ಸ್ವಇಚ್ಛೆಯಿಂದ ಪ್ರಕರಣ ದಾಖಲಿಸಿದ್ದಾರೆ" ಎಂದು ಸಿಎಂ ಹೇಳಿದರು.