ನ್ಯೂಸ್

ಇಂಥಾ ನರಕಯಾತನೆ ಯಾರಿಗೂ ಬೇಡ, ಇನ್ನೂ 2 ದಿನ ಇಲ್ಲಿದ್ರೆ ಸತ್ತು ಹೋಗ್ತೀನಿ ಕಾಪಾಡಿ ಎಂದು ಕಣ್ಣೀರಿಟ್ಟ ವ್ಯಕ್ತಿ!

ನವದೆಹಲಿ: ನಾಲ್ಕು ಕಾಸು ಸಂಪಾದಿಸಿ ಸಂಸಾರ ನಡೆಸಬೇಕೆಂಬ ಉದ್ದೇಶದಿಂದ ಅನೇಕ ಭಾರತೀಯರು ಗಲ್ಫ್​ ರಾಷ್ಟ್ರಗಳಿಗೆ ವಲಸೆ ಹೋಗುತ್ತಾರೆ. ಅದರಲ್ಲಿ ಕೆಲವರು ಸಾಕಷ್ಟು ಕಷ್ಟಗಳು ಮತ್ತು ಸಂಕಟಗಳನ್ನು ಅನುಭವಿಸಿ, ಭಾರತದಲ್ಲಿನ ತಮ್ಮ ಕುಟುಂಬ ಸದಸ್ಯರಿಗೆ ಹಣವನ್ನು ಕಳುಹಿಸುತ್ತಾರೆ. ಅಲ್ಲಿ ನರಕಯಾತನೆ ಅನುಭವಿಸುತ್ತಿದ್ದರೂ ನಮ್ಮವರಾದರೂ ನೆಮ್ಮದಿಯಿಂದ ಇರುತ್ತಾರೆ ಎಂಬ ಖುಷಿಯಿಂದ ತಮ್ಮ ನೋವನ್ನು ಮರೆಮಾಚುತ್ತಾರೆ.

ಇದೆಲ್ಲದರ ನಡುವೆ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸುವ ಟ್ರಾವೆಲ್ ಏಜೆಂಟ್​ಗಳ ವಂಚನೆಯಿಂದಾಗಿ ಸಾವಿರಾರು ಮಂದಿ ಆ ದೇಶಗಳ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಇದಲ್ಲದೆ, ಸರ್ಟಿಫಿಕೇಟ್, ಪಾಸ್​ಪೋರ್ಟ್​ಗಳನ್ನು ಕಿತ್ತುಕೊಂಡು ಮಾಲೀಕರು ಚಿತ್ರಹಿಂಸೆ ನೀಡುತ್ತಿರುವುದು ಮತ್ತೊಂದು ಆಘಾತಕಾರಿ ಸಂಗತಿಯಾಗಿದೆ. ಇಂತಹ ಹಲವು ಘಟನೆಗಳು ನಿತ್ಯ ಬೆಳಕಿಗೆ ಬರುತ್ತಿರುತ್ತವೆ.

ಗಲ್ಫ್ ರಾಷ್ಟ್ರ ಕುವೈತ್​ನಲ್ಲಿ ನರಕಯಾತನೆ ಅನುಭವಿಸುತ್ತಿರುವ ತೆಲುಗಿನ ವ್ಯಕ್ತಿಯೊಬ್ಬರು ಇತ್ತೀಚೆಗಷ್ಟೇ ವಿಡಿಯೋ ಸಂದೇಶವೊಂದನ್ನು ರವಾನಿಸಿದ್ದು, ಅದರಲ್ಲಿ ಗಲ್ಫ್​ ರಾಷ್ಟ್ರದಲ್ಲಿ ಅನುಭವಿಸುತ್ತಿರುವ ನರಕ ಯಾತನೆಗಳನ್ನು ಹೇಳಿಕೊಂಡಿದ್ದಾರೆ ಮತ್ತು ತನ್ನನ್ನು ರಕ್ಷಣೆ ಮಾಡುವಂತೆ ಕೇಳಿಕೊಂಡಿದ್ದಾರೆ. ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯ ವಾಲ್ಮೀಕಿಪುರಂ ಮಂಡಲದ ಚಿಂತಪರ್ತಿ ಮೂಲದ ಶಿವ ಎಂಬಾತನಿಗೆ ಪತ್ನಿ ಶಂಕರಮ್ಮ ಮತ್ತು ಇಬ್ಬರು ಪುತ್ರಿಯರಿದ್ದಾರೆ. ತನ್ನ ಕುಟುಂಬವನ್ನು ಪೋಷಿಸುವ ಉದ್ದೇಶದಿಂದ ಶಿವ ಕುವೈತ್​ಗೆ ಹೋಗಲು ನಿರ್ಧರಿಸಿದರು.

ಏಜೆಂಟ್ ಮೂಲಕ ಶಿವ ಒಂದು ತಿಂಗಳ ಹಿಂದಷ್ಟೇ ಕುವೈತ್​ಗೆ ಹೋಗಿದ್ದಾರೆ. ಅಲ್ಲಿನ ಮರುಭೂಮಿ ಪ್ರದೇಶದಲ್ಲಿ ಕೋಳಿ, ಕುರಿ, ಪಾರಿವಾಳ ಮತ್ತು ಬಾತುಕೋಳಿಗಳನ್ನು ಮೇಯಿಸುವ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಎತ್ತ ನೋಡಿದರೂ ಬರೀ ಮರುಭೂಮಿ, ಕಣ್ಣೆದುರಲ್ಲಿ ಜನಸಂಚಾರವೇ ಇರದ ಜಾಗದಲ್ಲಿದ್ದಾರೆ. ಮಾಲಿಕರು ಕನಿಷ್ಠ ಪಕ್ಷ ನೋಡಲು ಸಹ ಬರುತ್ತಿಲ್ಲವಂತೆ. ಊಟ-ನೀರು ಇರದೇ ಶಿವ ಮಾನಸಿಕವಾಗಿ ಕುಗ್ಗಿದ್ದಾರೆ. ಆತ ತನ್ನ ಪತ್ನಿ ಮತ್ತು ಏಜೆಂಟ್​ರನ್ನು ಸಂಪರ್ಕಿಸಿ ತನ್ನನ್ನು ವಾಪಸ್​ ಕರೆಸಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಆದರೆ ಅದು ನನ್ನಿಂದ ಸಾಧ್ಯವಿಲ್ಲ ಎಂದು ಏಜೆಂಟರು ಹೇಳಿದ್ದು, ಆತನ ಪತ್ನಿ ಗಂಡನನ್ನು ಕರೆತರಲು ಪ್ರಯತ್ನಿಸುತ್ತಿದ್ದಾರೆ.

ತವರು ದೇಶಕ್ಕೆ ಮರಳುವುದು ಕಷ್ಟವಾದ ಹಿನ್ನಲೆಯಲ್ಲಿ ಮತ್ತಷ್ಟು ಖಿನ್ನತೆಗೆ ಒಳಗಾಗಿರುವ ಶಿವ, ಕುವೈತ್​ನಲ್ಲಿ ತನಗಿರುವ ಕಷ್ಟಗಳನ್ನು ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ಮರುಭೂಮಿಯಲ್ಲಿ ಹೀನಾಯ ಜೀವನ ಅನುಭವಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಸುತ್ತಲಿನ ಮರಳು ದಿಬ್ಬಗಳನ್ನು ಬಿಟ್ಟರೆ ಮಾತನಾಡಲು ಒಬ್ಬನೇ ವ್ಯಕ್ತಿಯೂ ಇಲ್ಲ. ಬಿಸಿಲಿನ ತಾಪಕ್ಕೆ ಆರೋಗ್ಯ ಹಾಳಾಗಿದ್ದು ಇನ್ನೆರಡು ದಿನ ಇಲ್ಲೇ ಇದ್ದರೆ ಸಾಯುತ್ತೇನೆ ಎಂದು ಅಳಲು ತೋಡಿಕೊಳ್ಳುವ ಮೂಲಕ ರಕ್ಷಣೆ ಮಾಡುವಂತೆ ಕಣ್ಣೀರಿಟ್ಟಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಚಿವ ನಾರಾ ಲೋಕೇಶ್ ಅವರ ಗಮನಕ್ಕೆ ಬಂದಿದೆ. ಕೇಂದ್ರದ ನೆರವಿನಿಂದ ಶೀಘ್ರವೇ ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗುವುದು. ಟಿಡಿಪಿಯ ಎನ್‌ಆರ್‌ಐ ವಿಭಾಗವು ಶಿವನ ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿದೆ ಎಂದು ನಾರಾ ಲೋಕೇಶ್ ಹೇಳಿದ್ದಾರೆ. (ಏಜೆನ್ಸೀಸ್​)