ನವದೆಹಲಿ: ಕರೊನಾ ಪಿಡುಗನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಕೇರಳ ಸರ್ಕಾರ ಮಾಸ್ಕ್ ಧರಿಸದೇ ಇದ್ದರೆ 10 ಸಾವಿರ ರೂಪಾಯಿ ದಂಡ ವಿಧಿಸಲು ನಿರ್ಧರಿಸಿದೆ.
ಭಾನುವಾರ 9 ಅಂಶಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿರುವ ಕೇರಳ ಸರ್ಕಾರ ಇನ್ನೊಂದು ವರ್ಷ ಇವುಗಳ ಪಾಲನೆ ಕಡ್ಡಾಯ ಎಂದು ಹೇಳಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಕೆಲಸದ ಸ್ಥಳಗಳಲ್ಲೂ ಮಾಸ್ಕ್ ಧರಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಕಡ್ಡಾಯವಾಗಿ ದೈಹಿಕ ಅಂತರ ಕಾಯ್ದುಕೊಂಡು ವೈರಾಣು ಪ್ರಸರಣವಾಗದಂತೆ ಎಚ್ಚರಿಕೆ ವಹಿಸಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಇರುವುದು ಕಂಡು ಬಂದರೆ ತಪ್ಪಿತಸ್ಥರಿಗೆ ಸ್ಥಳದಲ್ಲೇ 10 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು. ಮದುವೆ ಸಮಾರಂಭಗಳಲ್ಲಿ ಗರಿಷ್ಠ 50 ಜನರು ಮಾತ್ರ ಪಾಲ್ಗೊಳ್ಳಬೇಕು.
ಕೋವಿಡ್-19ಯೇತರ ರೋಗಿಗಳು ಮೃತಪಟ್ಟಲ್ಲಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಗರಿಷ್ಠ 20 ಜನರಿಗೆ ಮಾತ್ರವೇ ಅವಕಾಶ ಇರಲಿದೆ.
ಸಾಮಾಜಿಕ ಸಭೆ, ಸಮಾರಂಭಗಳನ್ನು ಆಯೋಜಿಸಲು ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದನ್ನು ನಿಷೇಧಿಸಲಾಗಿದೆ.
ಅನ್ಯ ರಾಜ್ಯಗಳಿಂದ ಕೇರಳಕ್ಕೆ ಬರುವವರು ಕೇರಳ ಸರ್ಕಾರದ ಜಾಗ್ರತಾ ಇ-ಪ್ಲಾಟ್ಫಾರಂನಲ್ಲಿ ಹೆಸರು ನೋಂದಾಯಿಸುವುದು ಕಡ್ಡಾಯವಾಗಿದೆ. ಆದರೆ, ರಾಜ್ಯದೊಳಗೆ ಸುತ್ತಾಡಲು ಯಾವುದೇ ಪಾಸ್ನ ಅಗತ್ಯ ಇರುವುದಿಲ್ಲ.
ಯಾವುದೇ ಅಂಗಡಿಗಳಲ್ಲಿ ಒಮ್ಮೆಗೆ ಗರಿಷ್ಠ 20 ಜನರಿಗೆ ಮಾತ್ರ ಪ್ರವೇಶಾವಕಾಶವಿರುತ್ತದೆ. ದೈಹಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೊಳಿಸಲಾಗಿದೆ.
ಕರೊನಾ ಸೋಂಕು ಮೊದಲು ಪತ್ತೆಯಾಗಿದ್ದ ಕೇರಳ ರಾಜ್ಯದಲ್ಲಿ. ಸದ್ಯ ಆ ರಾಜ್ಯದಲ್ಲಿ 2,131 ಆ್ಯಕ್ಟೀವ್ ಕೇಸ್ಗಳಿದ್ದು, 25 ಜನರು ಮೃತಪಟ್ಟಿರುವುದಾಗಿ ಜುಲೈ 5ರ ಬೆಳಗ್ಗೆ 8 ಗಂಟೆಗೆ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.