ನ್ಯೂಸ್

ಚುನಾವಣಾ ಆಯೋಗದ ವಿರುದ್ಧದ ರಾಹುಲ್ ಆರೋಪಕ್ಕೆ ಧ್ವನಿಗೂಡಿಸಿದ ಶಿವಸೇನೆ | Election Commission

Election Commission: ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಕೈಜೋಡಿಸಿ ವಂಚನೆಗೆ ಅವಕಾಶ ಮಾಡಿಕೊಟ್ಟಿದೆ ಎಂದಿದ್ದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಶಿವಸೇನೆ (ಉದ್ದವ್ ಠಾಕ್ರೆ) ಬಣ ಧ್ವನಿಗೂಡಿಸಿವೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, ರಾಹುಲ್ ಪತ್ರಿಕಾಗೋಷ್ಠಿಗೆ ಚುನಾವಣಾ ಆಯೋಗ ಹಿಂಜರಿಕೆ ಮತ್ತು ಅಸಮಾಧಾನದ ಪ್ರತಿಕ್ರಿಯೆ ನೀಡಿದೆ ಎಂದರು.

ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯ ಬಳಿಕ ಚುನಾವಣಾ ಆಯೋಗವು ಸ್ಪಷ್ಟ ಉತ್ತರವನ್ನು ನೀಡಲು ಸಾಧ್ಯವಾಗದೆ, ಸಾಕ್ಷಿ ಕೇಳುತ್ತಿದೆ, ಆದರೆ ಈಗಾಗಲೇ ನಮ್ಮ ನಾಯಕರು ಎಲ್ಲಾ ಪುರಾವೆಗಳನ್ನು ಸಾರ್ವಜನಿಕವಾಗಿ ಪ್ರಸ್ತುತಪಡಿಸಿದ್ದಾರೆ ಎಂದು ತಿಳಿಸಿದರು.

ರಾಹುಲ್ ಹೇಳಿಕೆ ಬೆಂಬಲಿಸಿದ ಉದ್ಧವ್ ಶಿವಸೇನೆ

ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಕೂಡ ಮಹಾರಾಷ್ಟ್ರದ ಚುನಾವಣೆ ಸಮಯದಲ್ಲಿನ ಘಟನೆಗಳನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಆರೋಪಗಳನ್ನು ಬೆಂಬಲಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಿಯಾಂಕಾ, ರಾಹುಲ್ ಗಾಂಧಿ ಕರ್ನಾಟಕದಲ್ಲಿ ಮತಗಳನ್ನು ಅಕ್ರಮವಾಗಿ ಸೇರಿಸಲಾಗುತ್ತಿದೆ ಮತ್ತು ಅಳಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟ ಪುರಾವೆಗಳ ಮೂಲಕ ಮಂಡಿಸಿದ್ದು, ಮಹಾರಾಷ್ಟ್ರದಲ್ಲಿಯೂ ಇದೇ ರೀತಿಯ ಪ್ರಕರಣ ಸಂಭವಿಸಿದೆ. ವಿಶ್ವವಿದ್ಯಾಲಯ ಮತ್ತು ಕಾಲೇಜು ಕ್ಯಾಂಪಸ್‌ಗಳಿಂದ ಸುಮಾರು 12-13 ಸಾವಿರ ಮತಗಳು ಚಲಾವಣೆಯಾಗಿದ್ದು, ಇದರಲ್ಲಿ ಇತರ ರಾಜ್ಯಗಳ ವಿದ್ಯಾರ್ಥಿಗಳು ಮತ ಚಲಾಯಿಸಿದ್ದಾರೆ ಎಂದರು.

ಲೋಕಸಭಾ ಚುನಾವಣೆಗಗೂ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ 'ಒಂದು ರಾಷ್ಟ್ರ, ಒಂದು ಚುನಾವಣೆ' ಎಂಬ ಘೋಷಣೆ ಮಾಡಿದರು, ಆದರೆ ಅದು ಇಲ್ಲಿಯವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಇಂತಹ 400 ಕ್ಕೂ ಹೆಚ್ಚು ಪ್ರಕರಣಗಳಿದ್ದು, ಚುನಾವಣಾ ಆಯೋಗ ಜನರನ್ನು ಬೆದರಿಸುವ ಬದಲು ಸರಿಯಾದ ಮಾಹಿತಿ ನೀಡುವಂತೆ ಸಲಹೆ ನೀಡಿದರು.(ಏಜೆನ್ಸೀಸ್)