balochistan | ಬಲೂಚಿಸ್ತಾನದ ಕ್ವೆಟ್ಟಾ ಬಳಿಯ ಮಾರ್ಗತ್ ಪ್ರದೇಶದಲ್ಲಿ ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆಯ ಮೇಲೆ ಬಲೂಚ್ ಲಿಬರೇಶನ್ ಆರ್ಮಿ ದಾಳಿ ನಡೆಸಿದ್ದು, ಪಾಕ್ ಸೇನೆಯ 10 ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿದೆ. ಬಲೂಚಿಸ್ತಾನದ ಕ್ವೆಟ್ಟಾದಲ್ಲಿ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ದಾಳಿಯನ್ನು ನಡೆಸಿದೆ.
ಬಿಎಲ್‌ಎ ಈ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಈ ಘಟನೆ ಪಾಕಿಸ್ತಾನದ ಭದ್ರತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪಾಕ್ ನಾಶ ಮಾಡುವುದು ನಮ್ಮ ಉದ್ದೇಶವಾಗಿದೆ, ನಮ್ಮ ಸ್ವಾತಂತ್ರ್ಯವನ್ನು ಪಡೆಯುವುದಕ್ಕಾಗಿ ಈ ದಾಳಿ ಎಂದು ಹೇಳಲಾಗಿದೆ.
ಭದ್ರತಾ ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ ಪಾಕ್ ಸೇನೆಯ ಸುಬೇದಾರ್ ಶೆಹಜಾದ್ ಅಮೀನ್, ನಯಬ್ ಸುಬೇದಾರ್ ಅಬ್ಬಾಸ್, ಸಿಪಾಯಿ ಖಲೀಲ್, ಸಿಪಾಯಿ ಜಾಹಿದ್, ಸಿಪಾಯಿ ಖುರ್ರಂ ಮತ್ತು ಇತರರು ಹತ್ಯೆಗೀಡಾಗಿದ್ದಾರೆ.
ಈ ದಾಳಿ ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ನಿರಂತರ ಉದ್ವಿಗ್ನತೆಯ ಪ್ರತೀಕವಾಗಿದೆ. ಕಳೆದ ಗುರುವಾರ ಬಲೂಚಿಸ್ತಾನದಲ್ಲಿ ನಡೆದ ಪ್ರತ್ಯೇಕ ದಾಳಿಗಳಲ್ಲೂ ಏಳು ಸೇನಾ ಸಿಬ್ಬಂದಿ ಮೃತಪಟ್ಟು ನಾಲ್ವರು ಗಾಯಗೊಂಡಿದ್ದರು. ಈ ದಾಳಿಗಳು ಝಮುರಾನ್, ಕೊಲ್ವಾ ಹಾಗೂ ಕಲಾತ್ ಜಿಲ್ಲೆಗಳಲ್ಲಿ ನಡೆದಿದ್ದವು. ಇದೇ ವೇಳೆ, ಕೆಲವು ಪ್ರದೇಶಗಳಲ್ಲಿ ಭದ್ರತಾ ಠಾಣೆಗಳನ್ನು ವಶಪಡಿಸಿಕೊಂಡಿರುವುದಾಗಿ ಬಿಎಲ್‌ಎ ತಿಳಿಸಿದೆ. ಈ ಘಟನೆಗಳು ಪಾಕಿಸ್ತಾನಿ ಸೇನೆಯ ಭದ್ರತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿವೆ.
(ಏಜೆನ್ಸೀಸ್)
ಇದಕ್ಕೂ ಮೊದಲು ಬುಧವಾರ ಪೋಲಿಯೊ ಲಸಿಕೆ ತಂಡವನ್ನು ಕಾವಲು ಕಾಯುತ್ತಿದ್ದ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಗುರುತಿಸಲಾಗದ ದಾಳಿಕೋರರು ಗುಂಡು ಹಾರಿಸಿ ಕೊಂದರು. ಸಹಾಯಕ ಆಯುಕ್ತ ಅಕ್ರಮ್ ಹರಿಫಲ್ ಅವರ ಪ್ರಕಾರ, ಮಸ್ತುಂಗ್ ಜಿಲ್ಲೆಯ ತೀರಿಯಲ್ಲಿ ಪೋಲಿಯೊ ಲಸಿಕೆ ತಂಡವನ್ನು ರಕ್ಷಿಸುತ್ತಿದ್ದ ಲೆವೀಸ್ ಸಿಬ್ಬಂದಿ ಮೇಲೆ ಮುಸುಕುಧಾರಿ ಬಂದೂಕುಧಾರಿಗಳು ದಾಳಿ ನಡೆಸಿದ್ದರು.