ಒಂದು ರೂಪಾಯಿಗೆ ಇಡ್ಲಿ ಮಾರುತ್ತಿರುವ ‘ಇಡ್ಲಿ ಅಮ್ಮ’  
ನ್ಯೂಸ್

ಇಂದಿಗೂ ಕೇವಲ 1 ರೂ.ಗೆ ಇಡ್ಲಿ; 85ರ ‘ಇಡ್ಲಿ ಅಮ್ಮ’ನ ಕಥೆ ಕೇಳಿದ್ರೆ ನೀವು ಕೂಡ ಫಿದಾ ಆಗ್ತೀರಾ! | One-rupee idli

ತಮಿಳುನಾಡಿನ ಕೆ. ಕಮಲಾತ್ತಾಳ್ ಅವರು ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ಕೇವಲ 1 ರೂ.ಗೆ ಇಡ್ಲಿ ಮಾರುತ್ತಿದ್ದಾರೆ. ‘ಇಡ್ಲಿ ಅಮ್ಮ’ ಎಂದೇ ಖ್ಯಾತರಾಗಿರುವ ಅವರ ಜನಸೇವೆಯ ಕಥೆ ಇಲ್ಲಿದೆ.

Idli Amma: ಕೈಯಲ್ಲಿ 100 ರೂಪಾಯಿ ಇದ್ದರೂ ಇವತ್ತು ಒಂದು ಹೊತ್ತಿನ ಊಟಕ್ಕೆ ಏನು ಬರುತ್ತೆ ಅಂತ ಲೆಕ್ಕ ಹಾಕಬೇಕಾದ ಪರಿಸ್ಥಿತಿ ಇದೆ. ಆದರೆ ತಮಿಳುನಾಡಿನಲ್ಲಿ ಒಬ್ಬ ಅಜ್ಜಿ ಇಂದಿಗೂ ಕೇವಲ 1 ರೂಪಾಯಿಗೆ ಬಿಸಿ ಬಿಸಿ ಇಡ್ಲಿ ಮಾರುತ್ತಿದ್ದಾರೆ ಅಂದ್ರೆ ನಂಬ್ತೀರಾ? ಹೌದು, ಇದು ನಿಜ. ಅವರೇ ದೇಶಾದ್ಯಂತ ‘ಇಡ್ಲಿ ಅಮ್ಮ’ ಅಥವಾ ‘ಇಡ್ಲಿ ಪಾಟಿ’ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಕೆ. ಕಮಲಾತ್ತಾಳ್.

ತಮಿಳುನಾಡಿನ ಕೊಯಮತ್ತೂರು ನಗರದ ಹೊರವಲಯದಲ್ಲಿರುವ ವಡಿವೇಲಂಪಾಳಯಂ ಗ್ರಾಮದಲ್ಲಿ ಕಮಲಾತ್ತಾಳ್ ವಾಸವಾಗಿದ್ದಾರೆ. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಅವರು ಬಡವರು ಹಾಗೂ ವಲಸೆ ಕಾರ್ಮಿಕರಿಗೆ ಕೈಗೆಟುಕುವ ದರದಲ್ಲಿ ಊಟ ನೀಡುತ್ತಿದ್ದಾರೆ.

1 ರೂ. ಇಡ್ಲಿ ಜತೆಗೆ ಚಟ್ನಿ-ಸಾಂಬಾರ್

ಇವರ ಬಳಿ ಒಂದು ಇಡ್ಲಿಗೆ ಕೇವಲ 1.ರೂ. ಅದರ ಜತೆಗೆ ಚಟ್ನಿ ಹಾಗೂ ಸಾಂಬಾರ್ ಕೂಡ ಸಿಗುತ್ತೆ. ದಿನಸಿ ಸಾಮಗ್ರಿಗಳ ಬೆಲೆ ಎಷ್ಟೇ ಏರಿಕೆಯಾದರೂ ಇಡ್ಲಿ ದರ ಮಾತ್ರ ಹೆಚ್ಚಿಸದೇ ಇರೋದು ಇವರ ವಿಶೇಷತೆ.

ಪ್ರತಿದಿನ 400–600 ಇಡ್ಲಿ ತಯಾರಿಕೆ

ಸುಮಾರು 85ಕ್ಕೂ ಹೆಚ್ಚು ವಯಸ್ಸಿನ ಕಮಲಾತ್ತಾಳ್ ಪ್ರತಿದಿನ ಬೆಳಗ್ಗೆ 5.30ಕ್ಕೆ ಎದ್ದು ಇಡ್ಲಿ ತಯಾರಿಸಲು ಶುರು ಮಾಡುತ್ತಾರೆ. ದಿನಕ್ಕೆ ಸುಮಾರು 400ರಿಂದ 600 ಇಡ್ಲಿ ತಯಾರಿಸಿ ಮಾರಾಟ ಮಾಡುತ್ತಾರೆ. ದೊಡ್ಡ ಲಾಭ ಮಾಡಬೇಕು ಅನ್ನೋದು ಅವರ ಉದ್ದೇಶವಲ್ಲ. ಯಾರೂ ಹಸಿದ ಹೊಟ್ಟೆಯಲ್ಲಿ ಇರಬಾರದು ಅನ್ನೋದೇ ಅವರ ಆಶಯ. ಹೀಗಾಗಿಯೇ ಇಷ್ಟು ವರ್ಷಗಳಾದರೂ ಒಂದು ಇಡ್ಲಿಯ ಬೆಲೆಯನ್ನು 1 ರೂ.ನಲ್ಲೇ ಉಳಿಸಿಕೊಂಡಿದ್ದಾರೆ.

ಕೋವಿಡ್ ಸಮಯದಲ್ಲೂ ದರ ಹೆಚ್ಚಿಸಲಿಲ್ಲ

ಕೋವಿಡ್-19 ಲಾಕ್‌ಡೌನ್ ಸಮಯದಲ್ಲೂ ಕಮಲಾತ್ತಾಳ್ ಅವರ ಸೇವೆ ಜನರ ಗಮನ ಸೆಳೆದಿತ್ತು. ಸಾಮಗ್ರಿಗಳ ಬೆಲೆ ಏರಿಕೆ ಸೇರಿದಂತೆ ಹಲವು ಸವಾಲುಗಳ ನಡುವೆಯೂ ಅವರು ಇಡ್ಲಿ ದರವನ್ನು ಹೆಚ್ಚಿಸದೆ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ.

ಎಲ್ಲಿ ಸಿಗುತ್ತಾರೆ ‘ಇಡ್ಲಿ ಅಮ್ಮ’?

ಕಮಲಾತ್ತಾಳ್ ಅವರು ಕೊಯಮತ್ತೂರು ಸಮೀಪದ ವಡಿವೇಲಂಪಾಳಯಂ, ಪೂಲುವಪಟ್ಟಿ ಸಮೀಪ ಇದ್ದಾರೆ. ಕೊಯಮತ್ತೂರಿನಿಂದ ಈಶ ಫೌಂಡೇಶನ್‌ನ ಆದಿಯೋಗಿ ಶಿವನ ಪ್ರತಿಮೆ ಕಡೆಗೆ ಹೋಗುವ ಮಾರ್ಗದಲ್ಲಿ ಈ ಗ್ರಾಮ ಸಿಗುತ್ತದೆ.

ಇದನ್ನೂ ಓದಿ: ದಸರಾಗೆ ಹುಡುಗರ ಡ್ರೆಸ್ ಹೇಗಿರಬೇಕು? ಪ್ಯಾಂಟ್‌-ಶರ್ಟ್ ಬಿಟ್ಟು ಕುರ್ತಾ, ಪಂಚೆಯಲ್ಲಿ ಪಕ್ಕಾ ಕನ್ನಡಿಗರ ಲುಕ್ !| Boys' Dasara dress

ಇಲ್ಲಿ ಪ್ರತಿದಿನ ಬೆಳಗ್ಗೆ ಸುಮಾರು 7ರಿಂದ ಮಧ್ಯಾಹ್ನ 12ರವರೆಗೆ ಇಡ್ಲಿ ಸಿಗುತ್ತದೆ. ಹಸಿದವರಿಗೆ ಹೊಟ್ಟೆ ತುಂಬಿಸುವ ಕಮಲಾತ್ತಾಳ್ ಅವರ ಈ ಸರಳ ಸೇವೆಯೇ ಅವರನ್ನು ದೇಶದಾದ್ಯಂತ ಜನರು ಪ್ರೀತಿಯಿಂದ ‘ಇಡ್ಲಿ ಅಮ್ಮ’ ಎಂದು ಕರೆಯುವಂತೆ ಮಾಡಿದೆ.