ನ್ಯೂಸ್

ICICI ಬ್ಯಾಂಕ್​ ಮಿನಿಮಮ್​ ಬ್ಯಾಲೆನ್ಸ್ ಮಿತಿ 50 ಸಾವಿರ ರೂ.ಗೆ ಏರಿಕೆ: ಈ ಗ್ರಾಹಕರಿಗೆ ಮಾತ್ರ ಅನ್ವಯ! ICICI Bank

ICICI Bank : ಭಾರತದ ಎರಡನೇ ಅತಿದೊಡ್ಡ ಸಾಲದಾತ ಬ್ಯಾಂಕ್​ ಎನಿಸಿಕೊಂಡಿರುವ ಐಸಿಐಸಿಐ, ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಗ್ರಾಹಕರಿಗೆ ಮಾಸಿಕ ಮಿನಿಮಮ್​ ಬ್ಯಾಲೆನ್ಸ್​ ಅನ್ನು ಹೆಚ್ಚಳ ಮಾಡಿದೆ. ಆದರೆ, ಇದು ಹೊಸದಾಗಿ ಖಾತೆ ತೆರೆಯುವ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ.

ಮಿನಿಮಮ್​​​ ಬ್ಯಾಲೆನ್ಸ್​ ಕುರಿತು ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಇತ್ತೀಚಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅದರ ಪ್ರಕಾರ, ಆಗಸ್ಟ್ 1 ರಂದು ಅಥವಾ ನಂತರ ತಮ್ಮ ಉಳಿತಾಯ ಖಾತೆಗಳನ್ನು ತೆರೆದಿರುವ ಮೆಟ್ರೋ ನಗರ ಮತ್ತು ನಗರ ಪ್ರದೇಶಗಳಲ್ಲಿನ ಗ್ರಾಹಕರು ದಂಡವನ್ನು ತಪ್ಪಿಸಲು ಮಾಸಿಕ 50,000 ರೂ. ಮಿನಿಮಮ್​ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಿದೆ.

ಬಾಂಕಿನ ಹಳೆಯ ಗ್ರಾಹಕರಿಗೆ ಈ ನಿಯಮ ಅನ್ವಯಿಸುವುದಿಲ್ಲ. ಅವರು ಮಿನಿಮಮ್​ ಬ್ಯಾಲೆನ್ಸ್ 10,000 ರೂ.ನೊಂದಿಗೆ ಮುಂದುವರಿಯಲಿದ್ದಾರೆ. ಮೆಟ್ರೋ ನಗರ ಮತ್ತು ನಗರ ಪ್ರದೇಶಗಳನ್ನು ಹೊರತುಪಡಿಸಿ, ಅರೆ ನಗರ ಪ್ರದೇಶಗಳಲ್ಲಿ ಹೊಸ ಗ್ರಾಹಕರು 25,000 ರೂ. ಮಿನಿಮಮ್​ ಬ್ಯಾಲೆನ್ಸ್​ ಅನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಉಳಿದಂತೆ ಗ್ರಾಮೀಣ ಪ್ರದೇಶದ ಗ್ರಾಹಕರು 10,000 ರೂ. ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಾಗುತ್ತದೆ.

ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಳೆಯ ಗ್ರಾಹಕರಿಗೆ ಈ ಹಿಂದೆ ಇದ್ದ 5000 ರೂ. ಮಿನಿಮಮ್​ ಬ್ಯಾಲೆನ್ಸ್​ ನಿಯಮಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಒಂದು ವೇಳೆ ಮಿನಿಮಮ್​ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಗೆ ಶೇ. 6 ರಷ್ಟು ಅಥವಾ 500 ರೂಪಾಯಿಯನ್ನು ದಂಡವಾಗಿ ವಿಧಿಸಲಾಗುತ್ತದೆ.

ಮಿನಿಮಮ್​ ಬ್ಯಾಲೆನ್ಸ್​ ಹೊರತುಪಡಿಸಿ ಇನ್ನೂ ಒಂದು ಬದಲಾವಣೆಯನ್ನು ಐಸಿಐಸಿಐ ಬ್ಯಾಂಕ್​ ಮಾಡಿದೆ. ಅದೇನೆಂದರೆ, ಉಳಿತಾಯ ಖಾತೆಗೆ 3 ಬಾರಿ ಉಚಿತವಾಗಿ ಹಣ ಜಮಾ ಮಾಡಬಹುದು. ಆ ಬಳಿಕ ಪ್ರತಿ ವ್ಯವಹಾರಕ್ಕೆ ಅಥವಾ ಡೆಪಾಸಿಟ್​​ಗೆ 150 ರೂಪಾಯಿ ಪಾವತಿಸಬೇಕಾಗುತ್ತದೆ. ಇನ್ನು ತಿಂಗಳಿಗೆ 3 ಬಾರಿ ಹಣ ಹಿಂಪಡೆಯುವ ಅಥವಾ ವಿತ್​ಡ್ರಾ ಮಿತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

ಅಂದಹಾಗೆ, ದೇಶದ ಅತಿದೊಡ್ಡ ಸಾಲದಾತ ಬ್ಯಾಂಕ್​ ಎನಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), 2020ರಲ್ಲಿ ಮಿನಿಮಮ್​ ಬ್ಯಾಲೆನ್ಸ್ ನಿಯಮವನ್ನು ರದ್ದುಗೊಳಿಸಿದೆ. ಇದಕ್ಕೆ ತದ್ವಿರುತ್ತವಾಗಿ ಇತರ ಬ್ಯಾಂಕುಗಳಲ್ಲಿ ಹೆಚ್ಚಿನ ಬ್ಯಾಂಕ್​ಗಳು ಮಿನಿಮಮ್​ ಬ್ಯಾಲೆನ್ಸ್​ ಮಿತಿಗಳನ್ನು ಕಾಯ್ದುಕೊಳ್ಳುತ್ತವೆ. ಇದರ ಮಿತಿ ಸಾಮಾನ್ಯವಾಗಿ 2,000 ದಿಂದ 10,000 ರೂ. ವರೆಗೂ ಇರುತ್ತದೆ. (ಏಜೆನ್ಸೀಸ್​)