ನ್ಯೂಸ್

ರಷ್ಯಾದಿಂದ ಐಸಿಬಿಎಂ ದಾಳಿ; 40 ವರ್ಷದಲ್ಲೇ ಮೊದಲ ಬಾರಿಗೆ ಕ್ಷಿಪಣಿ ಬಳಕೆ

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಪರಮಾಣು ದಾಳಿ ಸಿದ್ಧಾಂತವನ್ನು ಬದಲಾಯಿಸಿರುವ ಬೆನ್ನಲ್ಲೇ, ಯೂಕ್ರೇನ್ ಮೇಲೆ ರಷ್ಯಾ ಪಡೆ ಇಂಟರ್-ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿ (ಐಸಿಬಿಎಂ) ಮೂಲಕ ದಾಳಿ ನಡೆಸಿದೆ. ಸಾಂಪ್ರದಾಯಿಕ (ಪರಮಾಣು ಅಲ್ಲದ) ಸಿಡಿತಲೆಯೊಂದಿಗೆ ಈ ದಾಳಿ ನಡೆಸಲಾಗಿದೆ. ಈ ಮೂಲಕ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಗೆ ರಷ್ಯಾ ಕಠಿಣ ಎಚ್ಚರಿಕೆ ಸಂದೇಶವನ್ನೂ ರವಾನಿಸಿದೆ. ಯೂಕ್ರೇನ್ - ರಷ್ಯಾ ಯುದ್ಧ 1,000 ದಿನಗಳನ್ನು ಪೂರೈಸಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿದೆ.

ಐಸಿಬಿಎಂ ಕ್ಷಿಪಣಿಯನ್ನು ಪರಮಾಣು ಸಿಡಿತಲೆಗಳನ್ನು ಸಾಗಿಸಲು ವಿನ್ಯಾಸಗೊಳಿಸಲಾಗಿದೆ. ಆದಾಗ್ಯೂ ಇದನ್ನು ಸಾಮಾನ್ಯ ಸಿಡಿತಲೆಗಳಿಗೂ ಸಹ ಬಳಸಬಹುದು. ಒಂದು ವೇಳೆ ದೇಶದ ಮೇಲೆ ಪರಮಾಣು ದಾಳಿ ನಡೆದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವ ನಿಟ್ಟಿನಲ್ಲಿ ಸಂಶೋಧನೆ ನಡೆಸಿ, ಐಸಿಬಿಎಂ ತಂತ್ರಜ್ಞಾನ, ವಿನ್ಯಾಸ ಅಭಿವೃದ್ಧಿಗೊಳಿಸಲಾಗಿದೆ.

ರಷ್ಯಾದ ಪಡೆಗಳು ಗುರುವಾರ ಬೆಳಗ್ಗೆ ಮಧ್ಯ ಯೂಕ್ರೇನ್ ನಗರವಾದ ದ್ನಿಪೊ›ದ ಮೇಲೆ ಕ್ಷಿಪಣಿಗಳನ್ನು ಉಡಾಯಿಸಿದೆ. ಮೂಲಸೌಕರ್ಯವನ್ನು ದುರ್ಬಲಗೊಳಿ ಸುವುದು ಇದರ ಗುರಿಯಾಗಿತ್ತು ಎಂದು ಯೂಕ್ರೇನ್ ವಾಯುಪಡೆ ಹೇಳಿಕೆ ನೀಡಿದೆ. ರಷ್ಯಾದ ಅಸ್ಟ್ರಾಖಾನ್ ಪ್ರದೇಶದಿಂದ ಖಂಡಾಂತರ ಕ್ಷಿಪಣಿಯನ್ನು ಉಡಾಯಿಸ ಲಾಯಿತು. ಯುದ್ಧ ಪ್ರಾರಂಭವಾದ ನಂತರ ಮೊದಲ ಬಾರಿಗೆ ಇಂಥ ಕ್ಷಿಪಣಿಗಳ ಮೂಲಕ ದಾಳಿ ನಡೆಸಲಾಗಿದೆ. ತನ್ನ ವಾಯುಪಡೆಯು ಆರು ಕ್ಷಿಪಣಿಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿದೆ. ರಷ್ಯಾದ ವೈಮಾನಿಕ ಬಾಂಬ್ ದಾಳಿಯಿಂದ ಹಲವಾರು ಮನೆಗಳಿಗೆ ಹಾನಿಯಾಗಿದೆ. ಕೈಗಾರಿಕಾ ಸಂಕೀರ್ಣ ಮತ್ತು ಪುನರ್ವಸತಿ ಕೇಂದ್ರವೂ ನಾಶವಾಗಿದೆ ಎಂದು ಯೂಕ್ರೇನ್ ಹೇಳಿಕೊಂಡಿದೆ. ಕ್ಷಿಪಣಿ ಉಡಾವಣೆ ಬಗ್ಗೆ ರಷ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದಾಗ್ಯೂ, ಪರಮಾಣು ಸಂಘರ್ಷವನ್ನು ತಪ್ಪಿಸಲು ಗರಿಷ್ಠ ಪ್ರಯತ್ನ ಮಾಡುತ್ತಿದೆ ಎಂದು ರಷ್ಯಾ ಸರ್ಕಾರದ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.

ಹಿನ್ನೆಲೆ ಏನು?: ರಷ್ಯಾ ವಿರುದ್ಧ ದೀರ್ಘ-ಶ್ರೇಣಿಯ ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಇತ್ತೀಚೆಗೆ ಅನುಮತಿ ನೀಡಿದ್ದರು. ಅನುಮೋದನೆ ದೊರೆತ ಕೆಲವೇ ಗಂಟೆಗಳಲ್ಲಿ ಅಮೆರಿಕ ನಿರ್ವಿುತ ಎಟಿಎಸಿಎಂಎಸ್ ಕ್ಷಿಪಣಿ ಮತ್ತು ಬ್ರಿಟನ್ ನಿರ್ವಿುತ ‘ಸ್ಟಾಮ್ರ್ ಶ್ಯಾಡೋ’ ಕ್ಷಿಪಣಿ ಮೂಲಕ ರಷ್ಯಾದ ಹಲವು ಪ್ರದೇಶಗಳ ಮೇಲೆ ಯೂಕ್ರೇನ್ ದಾಳಿ ನಡೆಸಿತ್ತು. ಈ ಬೆನ್ನಲ್ಲೇ ರಷ್ಯಾ ಐಸಿಬಿಎಂ ಕ್ಷಿಪಣಿಗಳ ಮೂಲಕ ಪ್ರತಿದಾಳಿ ನಡೆಸಿದೆ.

ಸಾಮರ್ಥ್ಯ: 5500 ಕಿಮೀ ದೂರದ ವರೆಗೆ ಕ್ರಮಿಸುವ ಸಾಮರ್ಥ್ಯ, 3 ಸಿಡಿತಲೆಗಳನ್ನು ಏಕಕಾಲದಲ್ಲಿ ಕೊಂಡೊಯ್ಯಬಲ್ಲದು, ಅಗ್ನಿ ಕ್ಷಿಪಣಿಯ ಮೂಲಕ ಭಾರತ ಕೂಡ ಇತ್ತೀಚೆಗೆ ಇದೇ ರೀತಿಯ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ, ಅಗ್ನಿ ಕ್ಷಿಪಣಿ 5 ಸಾವಿರ ಕಿಮೀ ವರೆಗೆ ಕ್ರಮಿಸಬಲ್ಲದು

ನೆತನ್ಯಾಹು ಬಂಧನಕ್ಕೆ ವಾರಂಟ್: ಪ್ರಸ್ತುತ ನಡೆಯುತ್ತಿರುವ ಮಧ್ಯಪ್ರಾಚ್ಯ ಸಂಘರ್ಷದ ನಡುವೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಇಸ್ರೇಲ್ ಮಾಜಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಬಂಧನ ವಾರಂಟ್ ಹೊರಡಿಸಿದೆ. ಗಾಜಾದಲ್ಲಿ ನಡೆಯುತ್ತಿರುವ ಸಂಘರ್ಷದ ವೇಳೆ ಮಾನವೀಯತೆಗೆ ವಿರುದ್ಧವಾಗಿ ನಡೆದುಕೊಂಡಿರುವುದು ಮತ್ತು ಯುದ್ಧಾಪರಾಧಗಳ ಕಾರಣ ಈ ವಾರಂಟ್ ಹೊರಡಿಸಲಾಗಿದೆ. ನೆತನ್ಯಾಹು ಮತ್ತು ಗ್ಯಾಲಂಟ್ ವಿರುದ್ಧ ನಂಬಲು ಅರ್ಹವಾದ ಆಧಾರಗಳಿವೆ. ಯುದ್ಧದ ವೇಳೆ ಜನರು ಹಸಿವಿನಿಂದ ಬಳಲುವಂತೆ ಮಾಡಲಾಗಿದೆ. ಹಸಿವನ್ನೇ ಯುದ್ಧದ ವಿಧಾನವಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಇಬ್ಬರೂ ನಾಯಕರು ಕ್ರಿಮಿನಲ್ ಹೊಣೆಗಾರಿಕೆ ಹೊಂದಿರುತ್ತಾರೆ ಎಂದು ಕೋರ್ಟ್ ಹೇಳಿದೆ. ಜತೆಗೆ ಮೂವರು ನ್ಯಾಯಾಧೀಶರ ಸಮಿತಿಯ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಿ ಇಸ್ರೇಲ್ ಮಾಡಿದ ಮೇಲ್ಮನವಿಗಳನ್ನು ತಿರಸ್ಕರಿಸಿದೆ. ನೇತನ್ಯಾಹು ಮತ್ತು ಗ್ಯಾಲಂಟ್ ಅವರು ಗಾಜಾದ ನಾಗರಿಕರಿಗೆ ಉದ್ದೇಶಪೂರ್ವಕವಾಗಿ ಆಹಾರ, ನೀರು, ಔಷಧ, ವೈದ್ಯಕೀಯ ಸರಬರಾಜು, ಇಂಧನ ಮತ್ತು ವಿದ್ಯುತ್ ಸಿಗದಂತೆ ಮಾಡಿದ್ದಾರೆ ಎಂದಿರುವ ಕೋರ್ಟ್, ಹಮಾಸ್ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ದಿಯಾಬ್ ಇಬ್ರಾಹಿಂ ಅಲ್-ಮಸ್ರಿ ಬಂಧನಕ್ಕೂ ವಾರಂಟ್ ಹೊರಡಿಸಿದೆ.