ಕೇಂದ್ರ ನಾಗರಿಕ ಸೇವಾ ಪರೀಕ್ಷೆ ( UPSC ) ಯನ್ನು ಪಾಸ್ ಮಾಡಬೇಕೆಂಬುದು ಲಕ್ಷಾಂತರ ಮಂದಿಯ ಕನಸು. ಇದೇ ಕನಸು ಹೊತ್ತುಕೊಂಡು ಪ್ರತಿವರ್ಷ ಪರೀಕ್ಷೆಯನ್ನು ಎದುರಿಸುತ್ತಾರೆ. ಐಎಎಸ್ ( IAS ), ಐಪಿಎಸ್ ( IPS ), ಐಎಫ್ಎಸ್ ( IFS ) ಸೇರಿದಂತೆ ಇನ್ನಿತರ ಹುದ್ದೆಯನ್ನು ಪಡೆಯಬೇಕೆಂದು ಶ್ರಮಿಸುತ್ತಾರೆ. ಆದರೆ, ಕೆಲವೇ ಮಂದಿ ಮಾತ್ರ ಈ ಪ್ರಯತ್ನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ.
ಇನ್ನು ಆರ್ಥಿಕವಾಗಿ ಸುಸ್ಥಿತಿಯಲ್ಲಿರುವವರು ಈ ಸಾಧನೆ ಮಾಡಿದರೆ ಅಷ್ಟೊಂದು ಗಮನ ಸೆಳೆಯುವುದಿಲ್ಲ. ಆದರೆ, ನಿರಂತರವಾಗಿ ಸವಾಲುಗಳನ್ನು ಎದುರಿಸಿ, ಕಷ್ಟಗಳನ್ನು ಮೆಟ್ಟಿನಿಂತು ಉನ್ನತ ಸ್ಥಾನಕ್ಕೇರುವವರು ದೇಶದ ಜನತೆಯ ನಡುವೆ ವಿಶೇಷ ಗಮನವನ್ನು ಸೆಳೆಯುತ್ತಾರೆ. ಯುಪಿಎಸ್ಸಿ ಪಾಸ್ ಮಾಡಬೇಕೆಂಬ ಅನೇಕರಿಗೆ ಸ್ಫೂರ್ತಿಯ ಚಿಲುಮೆಯಾಗಿ ನಿಲ್ಲುತ್ತಾರೆ. ಅಂತಹ ಸ್ಫೂರ್ತಿದಾಯಕ ವ್ಯಕ್ತಿಗಳಲ್ಲಿ ಐಎಎಸ್ ರಾಮ್ ಭಜನ್ ಕುಮಾರ್ ಕೂಡ ಒಬ್ಬರು.
ಯಾರು ಈ ರಾಮ್ ಭಜನ್ ಕುಮಾರ್?
ಭಜನ್ ಕುಮಾರ್ ಅವರು 2022ನೇ ಸಾಲಿನ ಐಎಎಸ್ ಅಧಿಕಾರಿ. ಇವರು ಮೂಲತಃ ಕಡಿಮೆ ಆದಾಯದ ಕುಟುಂಬದಿಂದ ಬಂದವರು. ರಾಜಸ್ಥಾನದ ಬಾಪಿ ಗ್ರಾಮದಲ್ಲಿ ಜನಿಸಿದ ಭಜನ್ ಕುಮಾರ್, ಜೀವನದುದ್ದಕ್ಕೂ ಸಾಕಷ್ಟು ಸವಾಲುಗಳನ್ನು ಎದುರಿಸಿದರು. ದಿನ ನಿತ್ಯದ ಊಟಕ್ಕಾಗಿ ತನ್ನ ತಾಯಿಯೊಂದಿಗೆ ಸೇರಿ ಕೂಲಿ ಕೆಲಸ ಮಾಡುತ್ತಿದ್ದರು. ಕಲ್ಲುಗಳನ್ನು ಒಡೆಯುವುದು ಮತ್ತು ಲೋಡ್ಗಳನ್ನು ಸಾಗಿಸುವ ಕೆಲಸವನ್ನು ಭಜನ್ ಕುಮಾರ್ ಮಾಡುತ್ತಿದ್ದರು.
ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೇ ಮಹಾಮಾರಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಭಜನ್ ಕುಮಾರ್ ಅವರು ತಂದೆಯನ್ನು ಕಳೆದುಕೊಂಡಾಗ ಅವರ ಕುಟುಂಬವೂ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿತು. ತನ್ನ ತಂದೆ ಬಿಟ್ಟು ಹೋದ ಬಳಿಕ ಇನ್ನಷ್ಟು ಜವಾಬ್ದಾರಿಗಳು ಭಜನ್ ಕುಮಾರ್ ಹೆಗಲಿಗೆ ಬಿದ್ದಿತು. ಹೀಗಾಗಿ ತನ್ನ ಬಡ ಕುಟುಂಬಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದರು. ಇದರ ನಡುವೆ ತಮ್ಮ ಅಧ್ಯಯನಕ್ಕೂ ಸ್ವಲ್ಪ ಸಮಯವನ್ನು ಮೀಸಲಿಟ್ಟಿದ್ದರು. ಹೀಗಾಗಿ ಭಜನ್ ಕುಮಾರ್ ರಾಜಸ್ಥಾನದ ದೌಸಾದ ಸರ್ಕಾರಿ ಕಾಲೇಜಿನಲ್ಲಿ ತಮ್ಮ ಪದವಿಯನ್ನು ಪಡೆದರು.
ರಾಮ್ ಭಜನ್ ಕುಮಾರ್ ಅವರು 2009ರಲ್ಲಿ ದೆಹಲಿಯಲ್ಲಿ ಪೋಲೀಸ್ ಕಾನ್ಸ್‌ಟೇಬಲ್ ಕೆಲಸ ಪಡೆದರು. ಕಾನ್‌ಸ್ಟೆಬಲ್ ಆಗಿದ್ದ ಸಮಯದಲ್ಲಿ ಅವರು ದೇಶದ ಅತ್ಯಂತ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿ ಭೇದಿಸಲು ಸ್ಫೂರ್ತಿ ಪಡೆದರು. 2015 ರಿಂದ UPSCಗೆ ತಯಾರಿ ಆರಂಭಿಸಿದ ರಾಮ್ ಭಜನ್ ಕುಮಾರ್, ಏಳು ಬಾರಿ ಪರೀಕ್ಷೆಯಲ್ಲಿ ಫೇಲ್ ಆದರು. ಆದರೆ, ತಮ್ಮ ಸಮರ್ಪಣೆ ಮತ್ತು ಅದಮ್ಯ ಮನೋಭಾವದಿಂದ ಪಯತ್ನ ಮುಂದುವರಿಸಿದರು. ಸೋಲೇ ಗೆಲುವಿನ ಮೆಟ್ಟಿಲು ಎಂಬಂತೆ ತಮ್ಮ ಓದುವ ತಂತ್ರವನ್ನು ಬದಲಾಯಿಸಿದರು ಮತ್ತು ಅಂತಿಮವಾಗಿ 2022 ರಲ್ಲಿ ಆಲ್ ಇಂಡಿಯಾ ರ್ಯಾಂಕ್ 667 ನೊಂದಿಗೆ ಯುಪಿಎಸ್ಸಿ ಪಾಸ್ ಮಾಡಿದರು. (ಏಜೆನ್ಸೀಸ್)