ಐಎಎಸ್ ಅಧಿಕಾರಿ ಮನೆಯಲ್ಲಿ ಪತ್ತೆ ಆಗಿರುವ ಚಿನ್ನದ ಗಟ್ಟಿ, ನಗದು ಮತ್ತಿತರ ಸಂಪತ್ತು. 
ನ್ಯೂಸ್

ಭ್ರಷ್ಟಾಚಾರದ ಆರೋಪದಲ್ಲಿ ಬಂಧಿತ ಐಎಎಸ್ ಅಧಿಕಾರಿಯ ಪುತ್ರ ಗುಂಡಿಟ್ಟುಕೊಂಡು ಆತ್ಮಹತ್ಯೆ!

ಪಂಜಾಬ್​: ಭ್ರಷ್ಟಾಚಾರ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಐಎಎಸ್​ ಅಧಿಕಾರಿಯೊಬ್ಬರ ಪುತ್ರ, ಮನೆಯಲ್ಲಿ ಅಧಿಕಾರಿಗಳಿಂದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರು ಪ್ರಕರಣ ನಡೆದಿದೆ.

ಭ್ರಷ್ಟಾಚಾರ ಆರೋಪದ ಮೇರೆಗೆ ಜೂ. 20ರಂದು ಬಂಧಿಸಲ್ಪಟ್ಟಿರುವ ಐಎಎಸ್ ಅಧಿಕಾರಿ ಸಂಜಯ್​ ಪೋಪ್ಲಿ ಮನೆಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಅಧಿಕಾರಿಯನ್ನು ಪಂಜಾಬ್ ವಿಚಕ್ಷಣಾ ದಳದ ಅಧಿಕಾರಿಗಳು ಇಂದು ತನಿಖೆಗಾಗಿ ಮನೆಗೆ ಕರೆತಂದಿದ್ದರು. ಈ ಸಂದರ್ಭದಲ್ಲಿ ಮೊದಲ ಮಹಡಿಗೆ ಹೋದ ಪುತ್ರ, ಕಾನೂನು ವಿದ್ಯಾರ್ಥಿ ಕಾರ್ತಿಕ್ ಪೋಪ್ಲಿ (26) ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಧ್ಯಾಹ್ನ 1.30ರ ಸುಮಾರಿಗೆ ಈ ಪ್ರಕರಣ ನಡೆದಿತ್ತು. ಈತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಮಾರ್ಗಮಧ್ಯೆ ಸಾವಿಗೀಡಾಗಿದ್ದಾನೆ.

ಪ್ರಾಥಮಿಕ ತನಿಖೆ ಪ್ರಕಾರ ಇದು ಆತ್ಮಹತ್ಯೆ ಎನ್ನಲಾಗಿದೆ ಎಂದು ಚಂಡೀಗಢ ಪೊಲೀಸರು ತಿಳಿಸಿದ್ದಾರೆ. ಆದರೆ ಐಎಎಸ್​ ಅಧಿಕಾರಿಯ ಮನೆಯವರು ಪಂಜಾಬ್​ ವಿಚಕ್ಷಣಾ ದಳದವರ ಕಿರುಕುಳದಿಂದಾಗಿ ಮಗ ಸಾವಿಗೀಡಾಗಿದ್ದಾನೆ ಎಂದು ಆರೋಪಿಸಿದ್ದಾರೆ.

ಪಂಜಾಬ್​ ಸರ್ಕಾರದ ಪಿಂಚಣಿ ವಿಭಾಗದಲ್ಲಿ ನಿರ್ದೇಶಕರಾಗಿದ್ದ ಸಂಜಯ್ ಪೋಪ್ಲಿ ವಿರುದ್ಧ ಗುತ್ತಿಗೆದಾರ ಸಂಜಯ್ ಕುಮಾರ್ ಎಂಬವರು ನೀಡಿದ್ದ ದೂರಿನ ಮೇರೆಗೆ ವಿಚಕ್ಷಣಾ ದಳದವರು ದಾಳಿ ನಡೆಸಿದ್ದರು. ಸಂಜಯ್ ಪೋಪ್ಲಿ ಮನೆಯಲ್ಲಿ ಚಿನ್ನದ ಗಟ್ಟಿ, ನಗದು ಸೇರಿ ಭಾರಿ ಸಂಪತ್ತು ಪತ್ತೆಯಾಗಿದೆ.