ನವದೆಹಲಿ: ಕೆಂಪುಕೋಟೆಯ ಬಳಿ ನಡೆದ ಕಾರು ಸ್ಫೋಟ ಪ್ರಕರಣ ( Delhi Blast ) ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ದೇಶದ ರಾಜಕೀಯ ಕೇಂದ್ರ ಬಿಂದುವಾಗಿರುವ ದೆಹಲಿಯಲ್ಲೇ ಇಂಥದ್ದೊಂದು ಹೀನ ಕೃತ್ಯ ನಡೆದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ದಿನಕ್ಕೊಂದು ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬರುತ್ತಲೇ ಇವೆ. ಸ್ಫೋಟಕ್ಕೆ ಬಳಸಲಾದ ಹ್ಯೂಂಡೈ ಐ20 ಕಾರಿಗೆ ಸಂಬಂಧಿಸಿದ ಮತ್ತೊಂದು ಆಘಾತಕಾರಿ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.
ಕಾರನ್ನು ದೆಹಲಿಗೆ ತರುವ ಮುನ್ನ ಹರಿಯಾಣದ ಫರೀದಾಬಾದ್ನ ಅಲ್ ಫಲಾಹ್ ಮೆಡಿಕಲ್ ಕಾಲೇಜು ಕ್ಯಾಂಪಸ್ನಲ್ಲಿ ಸುಮಾರು 11 ದಿನಗಳವರೆಗೆ ಪಾರ್ಕ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ನವೆಂಬರ್ 10ರಂದು ಅಂದರೆ ಸ್ಫೋಟ ನಡೆದ ದಿನ ಶಂಕಿತ ಸೂಸೈಡ್ ಬಾಂಬರ್ ಡಾ. ಉಮರ್ ನಬಿ ಕಾರನ್ನು ಕಾಲೇಜು ಕ್ಯಾಂಪಸ್ನಿಂದ ಹೊರಗಡೆ ತಂದನು. ತನ್ನಿಬ್ಬರು ಸಹಚರರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದರಿಂದ ಗಾಬರಿಗೊಂಡ ಉಮರ್, ಕಾರನ್ನು ಹೊರಗಡೆ ತಂದನು ಎಂಬ ಮಾಹಿತಿ ತನಿಖೆಯಲ್ಲಿ ತಿಳಿದುಬಂದಿದೆ.
ಸೋಮವಾರ ಸಂಜೆ ಸುಮಾರು 6.52ಕ್ಕೆ ಹಳೆ ದೆಹಲಿ ಏರಿಯಾದಲ್ಲಿ ಈ ಕಾರು ಸ್ಫೋಟಗೊಂಡಿದೆ. ಕೆಂಪು ಕೋಟೆಯ ಮೆಟ್ರೋ ನಿಲ್ದಾಣದ ಗೇಟ್ ನಂಬರ್ 1ರ ಸಮೀಪವಿರುವ ಟ್ರಾಫಿಕ್ ಸಿಗ್ನಲ್ ಹತ್ತಿರ ಹ್ಯೂಂಡೈ ಐ20 ಕಾರು ನಿಧಾನಗತಿಯಲ್ಲಿ ಸಾಗುವಾಗ ಸ್ಫೋಟಗೊಂಡು ದುರ್ಘಟನೆ ಸಂಭವಿಸಿದೆ. ಈ ಭೀಕರ ದಾಳಿಯಲ್ಲಿ 9 ಮಂದಿ ಮೃತಪಟ್ಟರೆ, ಸುಮಾರು 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಂದಹಾಗೆ ಡಾ. ಉಮರ್ ನಬಿ ಅಕ್ಟೋಬರ್ 29ರಂದು ಫರೀದಾಬಾದ್ ಮೂಲದ ಕಾರು ಡೀಲರ್ ಸೋನು ಎಂಬಾತನಿಂದ ಕಾರು ಖರೀದಿಸಿದನು. ಅದೇ ದಿನ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಪಡೆಯಲು ಕಾರನ್ನು ಹೊರಗೆ ತೆಗೆದುಕೊಂಡು ಹೋದನು. ಅದಕ್ಕೆ ಪೂರಕವಾಗಿ ಸಿಸಿಟಿವಿ ವಿಡಿಯೋದಲ್ಲಿ HR 26CE7674 ನಂಬರ್ ಪ್ಲೇಟ್ ಹೊಂದಿರುವ ಕಾರು, ಸೋನು ಅವರ ಕಚೇರಿಯ ರಾಯಲ್ ಕಾರ್ ಜೋನ್ ಬಳಿಯ ಮಾಲಿನ್ಯ ನಿಯಂತ್ರಣ (ಪಿಯುಸಿ) ಬೂತ್ ಪಕ್ಕದಲ್ಲಿ ನಿಂತಿರುವುದನ್ನು ಕಾಣಬಹುದು.
ಇದಾದ ಬಳಿಕ ಉಮರ್, ಕಾರನ್ನು ಅಲ್ ಫಲಾಹ್ ಮೆಡಿಕಲ್ ಕಾಲೇಜಿಗೆ ತೆಗೆದುಕೊಂಡು ಹೋಗಿ ಅಲ್ಲಿ ಡಾ. ಮುಜಾಮಿಲ್ ಶಕೀಲ್ಗೆ ಸೇರಿದ ಸ್ವಿಫ್ಟ್ ಡಿಜೈರ್ ಕಾರಿನ ಪಕ್ಕದಲ್ಲೇ ಪಾರ್ಕ್ ಮಾಡಿದ್ದಾನೆ. ಅಂದಹಾಗೆ, ಈ ಮುಜಾಮಿಲ್ ಬೇರೆ ಯಾರೂ ಅಲ್ಲ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾರಿ ಸ್ಫೋಟಕಗಳನ್ನು ವಶಕ್ಕೆ ಪಡೆದ ಪ್ರಕರಣದಲ್ಲಿ ಬಂಧಿಯಾಗಿರುವ ಪ್ರಮುಖ ಆರೋಪಿ. ಡಾ. ಶಕೀಲ್ಗೆ ಸಂಬಂಧಿಸಿದನ ಕಾರು ಡಾ. ಶಾಹೀನ್ ಸಹೀದ್ ಹೆಸರಿನಲ್ಲಿ ನೋಂದಣಿಯಾಗಿದೆ. ಅದೇ ಕಾರಿನಲ್ಲಿ ರೈಫಲ್‌ಗಳು ಮತ್ತು ಮದ್ದುಗುಂಡುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಅದೇ ಮೆಡಿಕಲ್ ಕಾಲೇಜಿನಲ್ಲಿ ಅಕ್ಟೋಬರ್ 29ರಿಂದ ನವೆಂಬರ್ 10ರವರೆಗೆ ಐ20 ಕಾರನ್ನು ಪಾರ್ಕ್ ಮಾಡಲಾಗಿತ್ತು. ಯಾವಾಗ ತನ್ನ ಸಹಚರರಾದ ಡಾ. ಮುಜಾಮಿಲ್ ಶಕೀಲ್ ಮತ್ತು ಡಾ. ಆದಿಲ್ ಅಹ್ಮದ್ ರಾಥರ್ ಬಂಧವಾಯಿತೋ ಅದರಿಂದ ಹೆದರಿದ ಉಮರ್, ತರಾತುರಿಯಲ್ಲಿ ಕಾರನ್ನು ಕ್ಯಾಂಪಸ್ನಿಂದ ಹೊರಗಡೆ ತೆಗೆದುಕೊಂಡು ದೆಹಲಿ ಕಡೆ ಹೊರಟನು. ಅದೇ ಕಾರು ಕನ್ನಾಟ್ ಪ್ಲೇಸ್ ಮತ್ತು ಮಯೂರ್ ವಿಹಾರ್ ಮಾರ್ಗವಾಗಿ ಚಲಿಸಿ, ಚಾಂದನಿ ಚೌಕ್‌ನಲ್ಲಿರುವ ಸುನೇಹ್ರಿ ಮಸೀದಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಯಿತು. ಸಿಸಿಟಿವಿ ವಿಡಿಯೋದಲ್ಲಿ ಮಧ್ಯಾಹ್ನ 3.19 ಕ್ಕೆ ಕಾರು ಪಾರ್ಕಿಂಗ್ ಸ್ಥಳಕ್ಕೆ ಪ್ರವೇಶಿಸುತ್ತಿರುವುದನ್ನು ಕಾಣಬಹುದು. ಶಂಕಿತ ಸೂಸೈಡ್ ಬಾಂಬರ್‌ನ ಕೈ ಕಾರಿನ ಕಿಟಕಿಯ ಮೇಲೆಯೇ ಇದೆ. ಸಂಜೆ 6.30 ರವರೆಗೆ ವಾಹನ ಪಾರ್ಕಿಂಗ್ ಸ್ಥಳದಿಂದ ಹೊರಬರಲಿಲ್ಲ. ಕಾರಿನಲ್ಲೇ ಇದ್ದ ನಬಿ ಒಂದು ಕ್ಷಣವೂ ಕಾರಿನಿಂದ ಹೊರಬರಲಿಲ್ಲ.
ಅಂದಹಾಗೆ, ವೈಟ್-ಕಾಲರ್ ಭಯೋತ್ಪಾದಕ ಮಾಡ್ಯೂಲ್ ಅನ್ನು ಭೇದಿಸಲು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಹರಿಯಾಣ ಪೊಲೀಸರು ಸೋಮವಾರ ಬೆಳಗ್ಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಡಾ. ಉಮರ್ ನಬಿಯ ಸಹಚರರಾದ ಡಾ. ಮುಜಮ್ಮಿಲ್ ಶಕೀಲ್ ಹಾಗೂ ಡಾ. ಅದೀಲ್ ಅಹ್ಮದ್ ರಾಥರ್ ಎಂಬುವರನ್ನು ಬಂಧಿಸಲಾಯಿತು. ಅಲ್ಲದೆ, ಪೊಲೀಸರು 2,900 ಕೆಜಿ ಸ್ಫೋಟಕಗಳು ಮತ್ತು ಅಸಾಲ್ಟ್ ರೈಫಲ್‌ಗಳು ಮತ್ತು ಪಿಸ್ತೂಲ್‌ಗಳಂತಹ ಶಸ್ತ್ರಾಸ್ತ್ರಗಳನ್ನು ಸಹ ಸೀಜ್ ಮಾಡಿದರು. ಮೂಲಗಳ ಪ್ರಕಾರ, ಡಾ. ಉಮರ್ ನಬಿ, ಕಾರು ಸ್ಫೋಟಿಸಲು ಈ ಬಂಧನ ಹಾಗೂ ಸ್ಫೋಟಕಗಳ ಸೀಜ್ ಕೂಡ ಕಾರಣವಾಯಿತು ಎಂದು ಹೇಳಲಾಗಿದೆ.
ಫರೀದಾಬಾದ್‌ನಲ್ಲಿ ನಡೆದ ಬೃಹತ್ ಸ್ಫೋಟಕ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನೌ ಮೂಲದ ಮಹಿಳಾ ವೈದ್ಯೆ ಡಾ. ಶಾಹೀನ್ ಸಯೀದ್ ಎಂಬಾಕೆಯನ್ನು ಮಂಗಳವಾರ ಬಂಧಿಸಲಾಗಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಷ್-ಎ-ಮೊಹಮ್ಮದ್ (ಜೆಇಎಂ) ನ ಮಹಿಳಾ ವಿಭಾಗವನ್ನು ಭಾರತದಲ್ಲಿ ಸ್ಥಾಪಿಸಲು ಸಯೀಡ್, ಭೂಗತವಾಗಿ ಕೆಲಸ ಮಾಡುತ್ತಿದ್ದಳು ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಈ ಪ್ರಕರಣ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ವಹಿಸಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್)