ತಮಿಳುನಾಡು: ಬಾಲಿವುಡ್ನ ಸ್ಟಾರ್ ಬೆಡಗಿ, ನಾಲ್ಕು ಬಾರಿ ರಾಷ್ಟ್ರಪ್ರಶಸ್ತಿ ವಿಜೇತೆ ನಟಿ ಕಂಗನಾ ರಣಾವತ್ ಪ್ರಸ್ತುತ ತಾವು ಅಭಿನಯಿಸಿದ ಬಹುನಿರೀಕ್ಷಿತ 'ಚಂದ್ರಮುಖಿ 2' ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತರಾಗಿದ್ದು, ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ತಮಗೆ ಕೇಳಲಾದ ಕುತೂಹಲದ ಪ್ರಶ್ನೆಯೊಂದಕ್ಕೆ ನೇರವಾಗಿ ಉತ್ತರಿಸಿದ್ದಾರೆ.
ಪಿ. ವಾಸು ನಿರ್ದೇಶನದ 'ಚಂದ್ರಮುಖಿ 2' ಚಿತ್ರದಲ್ಲಿ ನಟ ರಾಘವ್ ಲಾರೆನ್ಸ್ ಜತೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಕಂಗನಾ ಇತ್ತೀಚೆಗೆ ಸಿನಿಮಾದ ಪ್ರಚಾರದ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಕೇಳಿಬಂದ ಎರಡು ಬಹು ಮುಖ್ಯ ಪ್ರಶ್ನೆಗಳಿಗೆ ಹೆಚ್ಚು ಸಮಯ ತೆಗೆದುಕೊಳ್ಳದೆ ಉತ್ತರ ನೀಡಿದ್ದಾರೆ.
ಯಾವ ಒಬ್ಬ ನಿರ್ದೇಶಕನ ಚಿತ್ರದಲ್ಲಿ ಅಭಿನಯಿಸಲು ಬಯಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ, ಭಾರತೀಯ ಚಿತ್ರರಂಗದಲ್ಲಿ ಉನ್ನತ ಶ್ರೇಣಿಯನ್ನು ಸ್ಥಾಪಿಸಿರುವ ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ ಹೆಸರನ್ನು ಹೇಳಿದರು. ಅದರ ಬೆನ್ನಲ್ಲೇ ಮತ್ತೊಂದು ಪ್ರಶ್ನೆಗೆ ತಮ್ಮ ಅನಿಸಿಕೆ ಹೊರಹಾಕಿದ ನಟಿ, ನಟರಲ್ಲಿ ನನಗೆ ರಾಮ್ ಚರಣ್ ಅವರೊಟ್ಟಿಗೆ ಅಭಿನಯಿಸಲು ಇಷ್ಟವಿದೆ ಎಂದು ಹೇಳಿದರು.
ಕಂಗನಾ ಕೊಟ್ಟ ಉತ್ತರಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಮತ್ತು ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, 'ಚಂದ್ರಮುಖಿ 2' ಯಶಸ್ವಿಯಾಗಲಿ ಎಂದು ಆಶಿಸಿದ್ದಾರೆ,(ಏಜೆನ್ಸೀಸ್).