ನ್ಯೂಸ್

ಬೀದಿ ನಾಯಿಗಳ ಸ್ಥಳಾಂತರ: ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಯಿಂದ ಪ್ರಾಣಿ ಪ್ರಿಯರಲ್ಲಿ ಮೂಡಿದ ಭರವಸೆ! Stray Dogs

Stray Dogs : ದೆಹಲಿ ಎನ್‌ಸಿಆರ್‌ನಲ್ಲಿರುವ ಎಲ್ಲ ಬೀದಿ ನಾಯಿಗಳನ್ನು 8 ವಾರಗಳ ಒಳಗೆ ಆಶ್ರಯ ತಾಣಗಳಿಗೆ ಕಳುಹಿಸಬೇಕೆಂಬ ಸುಪ್ರೀಂ ಕೋರ್ಟ್​ ಆದೇಶ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಮುಖ್ಯ ನ್ಯಾಯಮೂರ್ತಿ ಬಿ.ಆರ್​. ಗವಾಯಿ, ಮತ್ತೊಮ್ಮೆ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ.

ನಾಯಿ ಕಡಿತ ಮತ್ತು ರೇಬೀಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಸತಿ ಪ್ರದೇಶಗಳಿಂದ ಎಲ್ಲ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಆಗಸ್ಟ್​ 11) ಆದೇಶಿಸಿತ್ತು. ಈ ಆದೇಶದ ಬೆನ್ನಲ್ಲೇ ಬಾಲಿವುಡ್​ ಸೆಲೆಬ್ರಿಟಿಗಳಿಂದ ಹಿಡಿದ ಬಹುತೇಕ ಮಂದಿ ವಿರೋಧಿಸಿದರು. ಬೀದಿ ನಾಯಿಗಳನ್ನು ಬಂಧನ ಮಾಡುವುದು ಸರಿಯಲ್ಲ, ಅವುಗಳಿಗೂ ಸ್ವಾತಂತ್ರ್ಯವಿದೆ ಎಂದು ಧ್ವನಿ ಎತ್ತಿದರು.

ಇಂದು (ಆಗಸ್ಟ್​ 13) ಬೆಳಗ್ಗೆ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಈ ವಿಚಾರವನ್ನು ಪ್ರಸ್ತಾಪ ಮಾಡಲಾಯಿತು. ಅಲ್ಲದೆ, ಬೀದಿ ನಾಯಿಗಳನ್ನು ಸ್ಥಳಾಂತರಿಸುವುದು ಮತ್ತು ಕೊಲ್ಲುವುದನ್ನು ನಿಷೇಧಿಸುವ ಮತ್ತು ಬೀದಿ ನಾಯಿಗಳಿಗಾಗಿಯೇ ಅಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ನಿಯಮಗಳನ್ನು ಪಾಲಿಸುವುದನ್ನು ಕಡ್ಡಾಯಗೊಳಿಸಿರುವ ಈ ಹಿಂದಿನ ನ್ಯಾಯಾಲಯದ ಆದೇಶದ ಬಗ್ಗೆ ಸಿಜೆಐ ಅವರಿಗೆ ತಿಳಿಸಲಾಯಿತು.

ಬಳಿಕ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಜೆಐ ಬಿ. ಆರ್​. ಗವಾನಿ ನಾನು ಈ ವಿಚಾರವನ್ನು ಪರಿಶೀಲಿಸುತ್ತೇನೆಂದು ಹೇಳಿದರು. ಸಿಜೆಐ ಅವರ ಹೇಳಿಕೆಯಿಂದ ಪ್ರಾಣಿ ಪ್ರಿಯರಲ್ಲಿ ಭರವಸೆ ಮೂಡಿದೆ.

ಅಂದಹಾಗೆ, ಸುಪ್ರೀಂ ಕೋರ್ಟ್ 2025, ಆಗಸ್ಟ್ 11 ರಂದು ದೆಹಲಿ-ಎನ್‌ಸಿಆರ್‌ನಲ್ಲಿ ಬೀದಿ ನಾಯಿಗಳ ಸಮಸ್ಯೆಗೆ ಸಂಬಂಧಿಸಿದಂತೆ ಪ್ರಮುಖ ಆದೇಶವನ್ನು ಹೊರಡಿಸಿತು. ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠವು ಆದೇಶ ಹೊರಡಿಸಿತು. ಆ ಆದೇಶದ ಪ್ರಕಾರ ಎಲ್ಲ ಬೀದಿ ನಾಯಿಗಳನ್ನು 8 ವಾರಗಳ ಒಳಗೆ ಸೆರೆಹಿಡಿದು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ದೆಹಲಿ-ಎನ್‌ಸಿಆರ್‌ನಲ್ಲಿ 5,000 ನಾಯಿಗಳಿಗೆ ಸ್ಥಳಾವಕಾಶವಿರುವ ಆಶ್ರಯ ಕೇಂದ್ರಗಳನ್ನು ಸ್ಥಾಪಿಸಬೇಕು, ಅಲ್ಲಿ ಕಾಸ್ಟರೀಕರಣ ಮತ್ತು ರೋಗನಿರೋಧಕ ಚಿಕಿತ್ಸೆ ನೀಡಬೇಕು.

ಇದಿಷ್ಟೇ ಅಲ್ಲದೆ, ನಾಯಿಗಳ ಕಡಿತದಿಂದ ರೇಬೀಸ್‌ನಿಂದಾಗಿ ಮಕ್ಕಳು ಮತ್ತು ವೃದ್ಧರ ಸುರಕ್ಷತೆಗೆ ಆದ್ಯತೆ ನೀಡಬೇಕು. ದೂರುಗಳಿಗೆ 4 ಗಂಟೆಗಳ ಒಳಗೆ ಕ್ರಮ ಕೈಗೊಳ್ಳಬೇಕು ಮತ್ತು ದೈನಂದಿನ ದಾಖಲೆ ಇಡಬೇಕು. ನಾಯಿಗಳ ಕಡಿತದ ದೂರುಗಳಿಗೆ ಒಂದು ವಾರದಲ್ಲಿ ಹೆಲ್ಪ್‌ಲೈನ್ ಆರಂಭಿಸಬೇಕೆಂದು ಹೇಳಿತು. ಈ ಆದೇಶವು ಸಾರ್ವಜನಿಕ ಸುರಕ್ಷತೆಗೆ ಒತ್ತು ನೀಡಿದರೂ, ಪ್ರಾಣಿ ಕಲ್ಯಾಣ ಸಂಸ್ಥೆಗಳು ಇದನ್ನು ವೈಜ್ಞಾನಿಕವಾಗಿ ಸರಿಯಲ್ಲ ಎಂದು ವಿರೋಧಿಸಿವೆ. ಇಂತಹ ದೊಡ್ಡ ಪ್ರಮಾಣದ ಸ್ಥಳಾಂತರವು ಅವೈಜ್ಞಾನಿಕ ಮತ್ತು ನಿಷ್ಪರಿಣಾಮಕಾರಿಯಾಗಿದೆ ಎಂದು ಪೆಟಾ (ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್) ಎಚ್ಚರಿಸಿತು. ಇದೀಗ ಮುಖ್ಯ ನ್ಯಾಯಮೂರ್ತಿಗಳು ನೀಡಿರುವ ಹೇಳಿಕೆ ಪ್ರಾಣಿ ಪ್ರಿಯರಲ್ಲಿ ಭರವಸೆ ಮೂಡಿಸಿದೆ. (ಏಜೆನ್ಸೀಸ್​)