Raj Tarun Case: ಕಳೆದ ವರ್ಷ ತನ್ನ ಪ್ರೇಯಸಿ ಲಾವಣ್ಯ ಕೊಟ್ಟ ದೂರಿನಿಂದ ದೊಡ್ಡ ಮಟ್ಟದ ವಿವಾದಕ್ಕೆ ಟಾಲಿವುಡ್ ಯುವ ನಟ ರಾಜ್ ತರುಣ್ ಗುರಿಯಾಗಿದ್ದರು. ತನ್ನನ್ನು ಪ್ರೀತಿಯ ಜಾಲಕ್ಕೆ ಬೀಳಿಸಿ, ಮದುವೆಯಾಗುವುದಾಗಿ ಭರವಸೆ ಕೊಟ್ಟು ವಂಚಿಸಿ, ಬಲವಂತವಾಗಿ ಗರ್ಭಪಾತ ಮಾಡಿಸಿದ್ದ ಎಂದು ಖುದ್ದಾಗಿ ಲಾವಣ್ಯ ಗಂಭೀರ ಆರೋಪ ಮಾಡಿದ್ದಳು. ಈ ಘಟನೆಯಿಂದ ತೀರ ಮನನೊಂದ ಲಾವಣ್ಯ, ಪ್ರಿಯಕರ ರಾಜ್ ವಿರುದ್ಧ ನರಸಿಂಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಅಂದಿನಿಂದ ಇಂದಿನವರೆಗೂ ಬೂದಿ ಮುಚ್ಚಿದ ಕೆಂಡದಂತಿದ್ದ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ಗಳು ಸಿಗುತ್ತಿದ್ದು, ಇತ್ತೀಚೆಗಷ್ಟೇ ಆರೋಪಿ ಮಸ್ತನ್ ಸಾಯಿ ಅರೆಸ್ಟ್ ಆಗಿದ್ದಾನೆ.
ಇಷ್ಟು ದಿನ ರಾಜ್ ತರುಣ್ ವಿರುದ್ಧ ದೊಡ್ಡ ಸಮರ ಸಾರುತ್ತಿದ್ದ ಲಾವಣ್ಯ ಇದೀಗ ಮಸ್ತಾನ್ ಸಾಯಿ ಬಂಧನದ ಬೆನ್ನಲ್ಲೇ ಆತನ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಎಸಗಿದ್ದಾಳೆ. ಈ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಗಳೂ ನಡೆದಿವೆ. ಚಂಚಲಗುಡ ಜೈಲಿನಲ್ಲಿ ಸದ್ಯ ಸೆರೆಮನೆ ವಾಸ ಅನುಭವಿಸುತ್ತಿರುವ ಆರೋಪಿ ಮಸ್ತಾನ್ ಸಾಯಿ, ಅಮಾಯಕ ಯುವತಿಯರು ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅವರ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿರುವುದು ಪೊಲೀಸರ ತನಿಖೆಯಲ್ಲಿ ಬಟಾಬಯಲಾಗಿದೆ.
ಆತನ ಬಳಿಯಿದ್ದ ಹಾರ್ಡ್ ಡಿಸ್ಕ್ನಲ್ಲಿ ಸುಮಾರು 300ಕ್ಕೂ ಅಧಿಕ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ. ಈ ಪ್ರಕರಣದಲ್ಲಿ ಮಸ್ತಾನ್ ಸಾಯಿನನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ನ್ಯಾಯಾಲಯವು ಮೂರು ದಿನಗಳ ಕಸ್ಟಡಿಗೆ ಅನುಮತಿ ನೀಡಿದ್ದು, ನರಸಿಂಗಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ ಎಂದು ವರದಿಯಾಗಿದೆ. ಇದರ ಮಧ್ಯೆ ಬಹಳ ದಿನಗಳ ನಂತರ ಮಾಧ್ಯಮಗಳ ಮುಂದೆ ಬಂದಿರುವ ಲಾವಣ್ಯ, ಮಸ್ತಾನ್ ಒಬ್ಬನಿಂದ ನಾನು ಮತ್ತು ರಾಜ್ ದೂರವಾದೆವು ಎಂದು ಕಣ್ಣೀರಿಟ್ಟಿದ್ದಾಳೆ.
ಇದನ್ನೂ ಓದಿ: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಗೆ ಚಾಲನೆ – ಸಂಚಾರ ನಿಯಮ ಪಾಲನೆಯಿಂದ ಪ್ರಾಣ ರಕ್ಷಣೆ ನಟ ಅರವಿಂದ ಬೋಳಾರ್
ಘಟನೆ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಲಾವಣ್ಯ, "ರಾಜ್ ತರುಣ್ ವಿರುದ್ಧದ ಎಲ್ಲಾ ಪ್ರಕರಣಗಳನ್ನು ನಾನು ಹಿಂಪಡೆಯುತ್ತೇನೆ. ನನ್ನ ಮತ್ತು ರಾಜ್ ದೂರಕ್ಕೆ ಈ ಮಸ್ತಾನ್ ಸಾಯಿಯೇ ಕಾರಣ. ನಾನು ಒಂದು ಪಾರ್ಟಿಯ ಸಲುವಾಗಿ ಮಸ್ತಾನ್ ಸಾಯಿ ಅವರ ಮನೆಗೆ ಹೋಗಿದ್ದೆ. ನಾನು ಬಟ್ಟೆ ಬದಲಾಯಿಸುವಾಗ ಆತ ನನ್ನ ಖಾಸಗಿ ದೃಶ್ಯವನ್ನು ಚಿತ್ರೀಕರಿಸಿದ್ದ. ಇದನ್ನು ಮುಂದಿಟ್ಟು ಆಗಾಗ್ಗೆ ನನಗೆ ಬೆದರಿಕೆ ಹಾಕುತ್ತಿದ್ದ. ನಾನು ನನ್ನ ವೀಡಿಯೊಗಳನ್ನು ಡಿಲೀಟ್ ಮಾಡಲು ಪ್ರಯತ್ನಿಸಿದೆ. ಆದರೆ, ಅದು ವಿಫಲವಾಯಿತು" ಎಂದಿದ್ದಾಳೆ.
"ಈ ಸಮಯದಲ್ಲಿ ಮಸ್ತಾನ್ ನನ್ನನ್ನು ಕೊಲ್ಲಲು ಪ್ರಯತ್ನಿಸಿದ. ಅವನು ಡ್ರಗ್ಸ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಇಲ್ಲಿಗೆ ಬಂದ ಯುವತಿಯರನ್ನು ನಶಗೆ ಒಳಪಡಿಸುತ್ತಿದ್ದ. ಪೊಲೀಸರು ಆತನ ಜಾಲವನ್ನು ತಡಕಾಡಿ, ಅವನ ಎಲ್ಲಾ ಚಟುವಟಿಕೆಗಳನ್ನು ತನಿಖೆಯಲ್ಲಿ ಬಹಿರಂಗಪಡಿಸಬೇಕು" ಎಂದು ಲಾವಣ್ಯ ಆಗ್ರಹಿಸಿದ್ದಾಳೆ.
"ಅಂದು ನಾನು ಜೈಲಿನಿಂದ ಹೊರಬಂದ ತಕ್ಷಣ ರಾಜ್ ತರುಣ್ ಮನೆಯಿಂದ ಹೊರಟುಹೋದರು. ರಾಜ್ ತರುಣ್ ಎಂತಹ ವ್ಯಕ್ತಿ ಎಂದು ನನಗೆ ಗೊತ್ತು. ಆತ ಅಪರಾಧಿ ಅಲ್ಲ. ಮಸ್ತಾನ್ ಸಾಯಿ ಕೃತ್ಯದಿಂದ ರಾಜ್ ನನ್ನನ್ನು ಬಿಟ್ಟು ಹೋದರಷ್ಟೇ. ಮಾಧ್ಯಮಗಳ ಮುಂದೆ ನಾನು ರಾಜ್ ತರುಣ್ಗೆ ಕ್ಷಮೆಯಾಚಿಸುವೆ. ನೀವೇನಾದರೂ ಈಗ ನನ್ನ ಪಕ್ಕದಲ್ಲಿದಿದ್ದರೆ ಖಂಡಿತ ನಿಮ್ಮ ಕಾಲಿಡಿದು ಕ್ಷಮೆ ಕೇಳುತ್ತಿದ್ದೆ ರಾಜ್ ಎಂದು ಕಣ್ಣೀರಿಟ್ಟಿದ್ದಾಳೆ. ಒಟ್ಟಾರೆ ಈ ಪ್ರಕರಣ ದಿನದಿಂದ ದಿನಕ್ಕೆ ವಿಭಿನ್ನ ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತಿದೆ ಎಂಬುದರಲ್ಲಿ ಅನುಮಾನವೇ ಇಲ್ಲ,(ಏಜೆನ್ಸೀಸ್).