ನ್ಯೂಸ್

ವುಹಾನ್ ಲ್ಯಾಬಿಂದ ವೈರಸ್​ ಲೀಕಾಗಿತ್ತೆಂದು ನಾನು ಸರಿಯಾಗೇ ಹೇಳಿದ್ದೆ : ಟ್ರಂಪ್

ವಾಷಿಂಗ್ಟನ್ : ಕರೊನಾ ವೈರಸ್​ ಚೀನಾದ ವುಹಾನ್​ ಲ್ಯಾಬ್​​ನಿಂದ ಹೊರಬಂದಿರುವುದೆಂದು ನಾನು ಸರಿಯಾಗಿಯೇ ಹೇಳಿದ್ದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿಕೆ ನೀಡಿದ್ದಾರೆ. ಚೀನಾದಲ್ಲಿ ವೈರಸ್​ ಉಗಮದ ಸರಿಯಾದ ಮೂಲ ತಿಳಿಯುವ ಬಗ್ಗೆ ನಡೆಯುತ್ತಿರುವ ಮತ್ತೊಂದು ಸುತ್ತಿನ ವಿವಾದದ ಹಿನ್ನೆಲೆಯಲ್ಲಿ ಟ್ರಂಪ್ ಈ ಮಾತು ಹೇಳಿದ್ದಾರೆ.

ಅಧ್ಯಕ್ಷನಾಗಿದ್ದಾಗ ತಾವು ಕರೊನಾ ವೈರಸ್​ ವುಹಾನ್ ಲ್ಯಾಬ್​ನಿಂದ ಬಂದಿದೆ ಎಂದು ಹೇಳಿದ್ದರ ಬಗ್ಗೆ ಈಗ ಎಲ್ಲರೂ ಸಹಮತ ವ್ಯಕ್ತಪಡಿಸುತ್ತಿದ್ದಾರೆ ಎಂದಿರುವ ಟ್ರಂಪ್​, ಈ ಲ್ಯಾಬ್​ ಲೀಕ್​ನಿಂದ ಸಂಭವಿಸಿರುವ ಸಾವು ಮತ್ತು ನಷ್ಟಗಳಿಗಾಗಿ ಚೀನಾದ ಮೇಲೆ ದಂಡ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

"ಅಮೆರಿಕದ ಕರೊನಾ ವೈರಸ್​ ಕುರಿತ ಸಲಹೆಗಾರ ಡಾ. ಅಂಥೋನಿ ಫಾಸಿ ಮತ್ತು ಚೀನಾದ ನಡುವಿನ ಮಾತುಕತೆಗಳನ್ನು ಕಡೆಗಣಿಸುವಂತಿಲ್ಲ. ತಾನು ಉಂಟುಮಾಡಿರುವ ಸಾವು ಮತ್ತು ಹಾನಿಗಾಗಿ ಅಮೆರಿಕಕ್ಕೆ ಮತ್ತು ಜಗತ್ತಿಗೆ 10 ಟ್ರಿಲಿಯನ್ ಡಾಲರ್​​ಗಳನ್ನು ಚೀನಾ ಪಾವತಿಸಬೇಕು" ಎಂದಿದ್ದಾರೆ ಟ್ರಂಪ್.

2020 ರ ಜನವರಿಯಿಂದ ಜೂನ್​ವರೆಗಿನ ಅವಧಿಯ ಡಾ.ಫಾಸಿ ಅವರ 3000 ಕ್ಕೂ ಹೆಚ್ಚು ಪುಟಗಳ ಖಾಸಗಿ ಈಮೇಲ್​ಗಳನ್ನು ಮಾಧ್ಯಮದವರು ಇದೀಗ ಹೊರಗೆಳೆದಿದ್ದಾರೆ. ಅದರಲ್ಲಿ ಕೋವಿಡ್​ 19 ವೈರಾಣು, ಚೀನಾದ ವುಹಾನ್​ನಲ್ಲಿರುವ ಲ್ಯಾಬ್​ನಿಂದ ಲೀಕ್ ಆದ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಈ ವಾದವನ್ನು ತಳ್ಳಿಹಾಕಲಾಗಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ, ಅಧಿಕೃತವಾಗಿ ಕರೊನಾ ವೈರಸ್​ ಗುರುತಿಸಲ್ಪಡುವುದಕ್ಕೆ ವಾರಗಳ ಮೊದಲು ವುಹಾನ್ ಸಂಶೋಧಕರಲ್ಲಿ ಕೋವಿಡ್-ಸಂಬಂಧಿತ ಕಾಯಿಲೆ ಕಂಡುಬಂದಿದ್ದವೆಂಬ ವರದಿಗಳು ಬಂದಿವೆ. ಜೊತೆಗೆ ವೈರಸ್‌ನ ಉಗಮದ ಬಗ್ಗೆ ಡಬ್ಲ್ಯೂಎಚ್​ಒ ನೇತೃತ್ವದಲ್ಲಿ ನಡೆದ ಅಂತರರಾಷ್ಟ್ರೀಯ ತನಿಖೆಯ ಫಲಿತಾಂಶವು ನಿರ್ಣಾಯಕವಾಗಿ ಏನನ್ನೂ ಹೇಳಿಲ್ಲ. ಆದ್ದರಿಂದ ಕರೊನಾ ವೈರಸ್​ ವುಹಾನ್​ ಲ್ಯಾಬ್​ನಿಂದ ಲೀಕಾಗಿದೆ ಎಂಬ ವಾದ ಮತ್ತೊಮ್ಮೆ ಮಹತ್ವ ಪಡೆದಿದೆ. (ಏಜೆನ್ಸೀಸ್)