ನ್ಯೂಸ್

ತಮಿಳುನಾಡಿನ ಶಿಕ್ಷಣ ಸಂಸ್ಥೆಗಳಿಂದ 150 ಕೋಟಿ ರೂ.ಗೂ ಅಧಿಕ ತೆರಿಗೆ ವಂಚನೆ: ಐಟಿ ದಾಳಿ ವೇಳೆ ಹಗರಣ ಬಹಿರಂಗ!

ನವದೆಹಲಿ: ಹಲವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಎಜುಕೇಶನ್​ ಗ್ರೂಪ್​ ಒಂದು 150 ಕೋಟಿ ರೂಪಾಯಿಗೂ ಅಧಿಕ ತೆರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮಿಳುನಾಡಿನ ಕೊಯಮತ್ತೂರು, ಈರೋಡ್, ಚೆನ್ನೈ ಮತ್ತು ನಾಮಕ್ಕಲ್​ ನ 22 ಸ್ಥಳಗಳಲ್ಲಿ ದಾಳಿ ನಡೆಸಿ ದಾಖಲೆ ಸಂಗ್ರಹಿಸಿದ್ದಾರೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಗುರುವಾರ ತಿಳಿಸಿದೆ.

ಹಣಪಾವತಿಯ ವೇಳೆ 150 ಕೋಟಿ ರೂಪಾಯಿಗೂ ಅಧಿಕ ತೆರಿಗೆ ವಂಚನೆ ಮಾಡಿದ್ದಕ್ಕೆ ಸಂಬಂಧಿಸಿದ ದಾಖಲೆಗಳು ಶಿಕ್ಷಣ ಸಂಸ್ಥೆಗಳ ಕಚೇರಿಯಲ್ಲಿ ಪತ್ತೆಯಾಗಿದೆ. ಅಲ್ಲದೆ, 5 ಕೋಟಿ ರೂಪಾಯಿ ನಗದನ್ನೂ ವಶಪಡಿಸಿಕೊಳ್ಳಲಾಗಿದೆ. ಕಂಪ್ಯೂಟರ್ ಮತ್ತು ಇತರೆ ಇಲೆಕ್ಟ್ರಾನಿಕ್ ಉಪಕರಣಗಳನ್ನು ಅಲ್ಲಿಂದ ವಶಪಡಿಸಲಾಗಿದ್ದು, ಅವುಗಳ ಪರಿಶೀಲನೆ ಪ್ರಗತಿಯಲ್ಲಿದೆ.

ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಹಣವನ್ನು ಸರಿಯಾದ ಲೆಕ್ಕಪುಸ್ತಕದಲ್ಲಿ ದಾಖಲಿಸಿಲ್ಲ. ರಾಮನ ಲೆಕ್ಕ, ಕೃಷ್ಣನ ಲೆಕ್ಕ ತೋರಿಸುವುದಕ್ಕೆ ಬೇಕಾದಂತೆ ಹಣ ಸಂಗ್ರಹದ ದಾಖಲೆಗಳನ್ನು ಇರಿಸಿಕೊಂಡಿದ್ದು, ಯಾವುದರಲ್ಲೂ ಸ್ಪಷ್ಟತೆ ಇಲ್ಲ. ಈ ಶಿಕ್ಷಣ ಸಂಸ್ಥೆಯಲ್ಲಿ ಒಬ್ಬ ಸಿವಿಲ್ ಕಾಂಟ್ರಾಕ್ಟರ್​, ಒಬ್ಬ ಆರ್ಕಿಟೆಕ್ಟ್​, ಟೆಕ್ಸ್​ಟೈಲ್ ವ್ಯಾಪಾರಿಗಳು ಸೇರಿ ಹಲವು ಪಾಲುದಾರರಿದ್ದಾರೆ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ. (ಏಜೆನ್ಸೀಸ್)