ಆಂಧ್ರಪ್ರದೇಶ: ಪರಿಶ್ರಮದಿಂದ ಗುರಿಯನ್ನು ಸಾಧಿಸುವ ಛಲ ಬಿಡದ ಅನೇಕ ನಟ-ನಟಿಯರು ಎಷ್ಟೇ ಕಷ್ಟವಾಗಲಿ ಈ ಸಿನಿಮಾವನ್ನು ಸಂಪೂರ್ಣವಾಗಿ ಮುಗಿಸಿ, ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿ, ಭರ್ಜರಿ ಸಕ್ಸಸ್ ನೋಡಬೇಕು ಎಂದು ಹಗಲು-ರಾತ್ರಿ ಕನಸು ಕಾಣುತ್ತಿರುತ್ತಾರೆ. ಕೇವಲ ಕನಸು ಕಾಣದೆ, ಅದನ್ನು ಈಡೇರಿಸಿಕೊಳ್ಳಲು ಶತಾಯಗತಾಯ ಪ್ರಯತ್ನವನ್ನು ಪಡುತ್ತಾರೆ. ಆ ಸಾಲಿಗೆ ಸೇರ್ಪಡೆಯಾದ ನಟ ಎಂದರೆ ಅದು 'ಹನು-ಮ್ಯಾನ್' ಖ್ಯಾತಿಯ ಸೂಪರ್ ಹೀರೋ ತೇಜ ಸಜ್ಜ.
ತನ್ನ ಅದ್ದೂರಿ ವಿಎಫ್‌ಎಕ್ಸ್ ಕೆಲಸಗಳಿಂದಲೇ ಪ್ರೇಕ್ಷಕರನ್ನು ಮನರಂಜಿಸಿ, ಪಾಸಿಟಿವ್ ವಿಮರ್ಶೆಗಳನ್ನು ಗಳಿಸಿದ ಈ ಚಿತ್ರ, ಸದ್ಯ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಯಶಸ್ಸನ್ನು ಕಂಡಿದೆ. ಜ.12 ರಂದು ಜಾಗತಿಕವಾಗಿ ರಿಲೀಸ್ ಆದ ಪ್ಯಾನ್ ಇಂಡಿಯಾ 'ಹನು-ಮ್ಯಾನ್', ಬಿಡುಗಡೆಯ ಮೊದಲ ದಿನದಿಂದಲೂ ಉತ್ತಮ ಕಲೆಕ್ಷನ್ನೊಂದಿಗೆ ಇಂದು ಬ್ಲಾಕ್ಬಸ್ಟರ್ ಚಿತ್ರವಾಗಿ ಹೊರಹೊಮ್ಮಿದೆ.
ಸದ್ಯ ಈ ಯಶಸ್ಸನ್ನು ಆನಂದಿಸುತ್ತಿರುವ ನಟ ತೇಜ ಸಜ್ಜ, ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿ, ಸಿನಿಮಾಗೂ ಮುನ್ನ ಹಾಗೂ ಚಿತ್ರೀಕರಣದ ವೇಳೆ ನಡೆದ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. "ಈ ಚಿತ್ರದ ಚಿತ್ರೀಕರಣ ನಡೆಯುವಾಗ ಎರಡೂವರೆ ವರ್ಷಗಳ ಅವಧಿಯಲ್ಲಿ ನನಗೆ ಸುಮಾರು 70-75 ಪ್ರಾಜೆಕ್ಟ್‌ಗಳು ಸಿಕ್ಕಿದ್ದವು. ಆದ್ರೆ, ನಾನು ಅದನ್ನು ತಿರಸ್ಕರಿಸಿದೆ. ಆ 75 ಚಿತ್ರಗಳ ಪೈಕಿ ಸುಮಾರು 15 ಫಿಲಂಗಳು ಒಳ್ಳೆಯ ಕಥೆ ಆಧರಿಸಿತ್ತು" ಎಂದು ಹೇಳಿದರು.
"ಸಾಮಾನ್ಯವಾಗಿ ಎಲ್ಲಾ ನಟರು ಒಂದು ಸಿನಿಮಾಗಾಗಿ ಎರಡರಿಂದ ಮೂರು ಲುಕ್ ಟೆಸ್ಟ್ ನೀಡುತ್ತಾರೆ. ಆದ್ರೆ, ನಾನು 'ಹನು-ಮ್ಯಾನ್' ಚಿತ್ರಕ್ಕಾಗಿ 25 ಲುಕ್ ಟೆಸ್ಟ್ ಕೊಟ್ಟಿದ್ದೇನೆ. ಈ ಚಿತ್ರದ ಎಲ್ಲಾ ಸಾಹಸಗಳನ್ನು ನಾನೇ ಮಾಡಿದ್ದೇನೆ. ಬಾಡಿ ಡಬಲ್ ಅಥವಾ ವಿಎಫ್‌ಎಕ್ಸ್ ಅನ್ನು ಬಳಸಿಲ್ಲ. ಸ್ವತಃ ಸ್ಕೂಬಾ ಡೈವಿಂಗ್ ಕಲಿತು, ನೀರೊಳಗಿನ ಸೀಕ್ವೆನ್ಸ್ ಮಾಡಿದ್ದೇನೆ" ಎಂದು ತೇಜ ಸಜ್ಜ ಹೇಳಿದ್ದಾರೆ,(ಏಜೆನ್ಸೀಸ್).