ನ್ಯೂಸ್

ಏಕತಾ ಪ್ರತಿಮೆಗೆ ಭೇಟಿ ನೀಡಿದ ಸಿಎಂ ಒಮರ್ ಅಬ್ದುಲ್ಲಾ; ಇದು ಏಕತೆಯ ಸಂದೇಶ ಎಂದ ಮೋದಿ! | Omar Abdullah

Omar Abdullah: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಗುಜರಾತ್‌ನ ಏಕತಾ ಪ್ರತಿಮೆಗೆ ಭೇಟಿ ನೀಡಿರುವ ಫೋಟೋವೊಂದನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್​​ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ಏಕತೆಯ ಸಂದೇಶವನ್ನು ನೀಡುತ್ತದೆ ಎಂದಿದ್ದಾರೆ.

ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕಾರ್ಯಕ್ರಮಕ್ಕಾಗಿ ಅಹಮದಾಬಾದ್‌ಗೆ ತೆರಳಿದ್ದ ಒಮರ್ ಅಬ್ದುಲ್ಲಾ, ಅಲ್ಲಿನ ಅನುಭವವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರವಾಸೋದ್ಯಮ ಕಾರ್ಯಕ್ರಮಕ್ಕಾಗಿ ಅಹಮದಾಬಾದ್‌ನಲ್ಲಿದ್ದಾಗ, ಪ್ರಸಿದ್ಧ ಸಬರಮತಿ ನದಿ ಮುಂಭಾಗ ಬೆಳಿಗ್ಗೆ ವಾಯುವಿಹಾರ ಮಾಡುವುದು ಉತ್ತಮ ಅನುಭವ, ನಾನು ವಾಕಿಂಗ್ ಮಾಡಲು ಇಷ್ಟಪಡುವ ಅತ್ಯುತ್ತಮ ಸ್ಥಳಗಳಲ್ಲಿ ಇದು ಒಂದಾಗಿದೆ. ಇತರ ಜನರೊಂದಿಗೆ ವಾಕಿಂಗ್ ಮಾಡುವುದು ಸಂತೋಷದ ವಿಷಯ, ಅದ್ಭುತವಾದ ಅಟಲ್ ಪಾದದ ಸೇತುವೆಯನ್ನು ದಾಟಿ ಓಡುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಸಿಎಂ ಅಬ್ದುಲ್ಲಾ ಬರೆದುಕೊಂಡಿದ್ದಾರೆ.

ಒಮರ್ ಅಬ್ದುಲ್ಲಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, "ಕಾಶ್ಮೀರದಿಂದ ಕೆವಾಡಿಯಾಗೆ! ಒಮರ್ ಅಬ್ದುಲ್ಲಾ ಅವರು ಸಬರಮತಿ ನದಿ ದಂಡೆಯಲ್ಲಿ ತಮ್ಮ ಓಟವನ್ನು ಆನಂದಿಸುತ್ತಿರುವುದನ್ನು ಮತ್ತು ಏಕತಾ ಪ್ರತಿಮೆಗೆ ಭೇಟಿ ನೀಡಿರುವುದನ್ನು ನೋಡಲು ಸಂತೋಷವಾಗುತ್ತಿದೆ, ಅವರ ಭೇಟಿಯು ಏಕತೆಯ ಪ್ರಮುಖ ಸಂದೇಶವನ್ನು ನೀಡುತ್ತದೆ ಮತ್ತು ಬೇರೆ ಬೇರೆ ರಾಜ್ಯಗಳ ಜನರನ್ನು ಭಾರತದ ವಿವಿಧ ಭಾಗಗಳಿಗೆ ಪ್ರಯಾಣಿಸುವಂತೆ ಪ್ರೇರೇಪಿಸುತ್ತದೆ ಎಂದು ಬರೆದಿದ್ದಾರೆ.

ಪ್ರಧಾನಿ ಮೋದಿಯವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅಬ್ದುಲ್ಲಾ, ಪ್ರಯಾಣವು ನಮ್ಮ ದೃಷ್ಟಿಕೋನ ಮತ್ತು ಮನಸ್ಸನ್ನು ವಿಸ್ತರಿಸುತ್ತದೆ ಎಂದು ದೃಢವಾಗಿ ನಂಬಿದ್ದು, ಪ್ರವಾಸೋದ್ಯಮವು ನಮ್ಮ ಆರ್ಥಿಕತೆಯ ನಿರ್ಣಾಯಕ ಭಾಗವಾಗಿದೆ ಮತ್ತು ಲಕ್ಷಾಂತರ ಜನರಿಗೆ ಲಾಭದಾಯಕವಾಗಿ ಉದ್ಯೋಗ ನೀಡುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಇದು ಜಮ್ಮು ಕಾಶ್ಮೀರಕ್ಕೆ ಮುಖ್ಯವಾಗಿದೆ. ಆದ್ದರಿಂದಲೇ ನಾನು ಮತ್ತು ನನ್ನ ಸಹೋದ್ಯೋಗಿಗಳು ಪಹಲ್ಗಾಮ ಘಟನೆ ನಡೆದ ನಂತರ ನಮ್ಮ ದೇಶದ ಪ್ರವಾಸಿಗರನ್ನು ಮತ್ತೇ ರಾಜ್ಯಕ್ಕೆ ಭೇಟಿ ನೀಡುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.(ಏಜೆನ್ಸೀಸ್)