San Rachel : ಬಣ್ಣದ ಆಧಾರದ ಮೇಲಿನ ತಾರತಮ್ಯದ ವಿರುದ್ಧ ಹೋರಾಟ ಮಾಡಿ ಪ್ರಸಿದ್ಧಿಯಾಗಿದ್ದ ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸ್ಯಾನ್ ರಾಚೆಲ್ (26) ಸಾವಿಗೆ ಶರಣಾಗಿದ್ದು, ಈ ಪ್ರಕರಣದ ತನಿಖೆ ನಡೆಸುತ್ತಿರುವ ಚೆನ್ನೈ ಪೊಲೀಸರಿಗೆ ಡೆತ್ನೋಟ್ ಲಭ್ಯವಾಗಿದೆ. ಮೃತ ರಾಚೆಲ್ಗೆ ಸಾಲವಿತ್ತು ಎಂದು ತಿಳಿದುಬಂದಿದೆ.
ತನ್ನ ಮದುವೆಗಾಗಿ ರಾಚೆಲ್ 6 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ತಂದೆ ಮತ್ತು ಗಂಡನ ಅರಿವಿಲ್ಲದೆ ಈ ಸಾಲವನ್ನು ತೆಗೆದುಕೊಳ್ಳಲಾಗಿತ್ತು. ತನ್ನ ತಂದೆಯೇ ತನಗೆ ಇಷ್ಟೊಂದು ಹಣ ಕೊಟ್ಟಿದ್ದಾರೆ ಎಂದು ಪತಿ ಬಳಿ ರಾಚೆಲ್ ಸುಳ್ಳು ಹೇಳಿದ್ದಳು. ಆ ಸಾಲವನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ ಎಂದು ಡೆತ್ನೋಟ್ನಲ್ಲಿ ರಾಚೆಲ್ ಉಲ್ಲೇಖಿಸಿದ್ದಾರೆ.
ತನ್ನ ತಂದೆಗೆ ಬರೆದ ಪತ್ರದಲ್ಲಿ, ತಾನು ಹಣವನ್ನು ಯಾರೋ ಒಬ್ಬರಿಗೆ ಪಾವತಿಸಬೇಕಿತ್ತು ಎಂದು ರಾಚೆಲ್ ಉಲ್ಲೇಖಿಸಿದ್ದಾರೆ. ಸದ್ಯ ಸಾವಿನ ಸುತ್ತ ಯಾವುದೇ ನಿಗೂಢತೆ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ರಾಚೆಲ್ ಸಾವಿಗೆ ಕಾರಣ ಅತಿಯಾದ ನಿದ್ರೆ ಮಾತ್ರೆಗಳು. ಅಸ್ವಸ್ಥಳಾಗಿದ್ದ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದಾದ ನಂತರ ಆಕೆಯನ್ನು ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ರಾಚೆಲ್ ಸಾವಿಗೀಡಾದಳು.
ಪುದುಚೇರಿಯಲ್ಲಿ ಹುಟ್ಟಿ ಬೆಳೆದ ಸ್ಯಾನ್ ರಾಚೆಲ್ ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡರು. ಆಕೆಯ ತಂದೆ ಡಿ. ಗಾಂಧಿ ಮಗಳನ್ನು ಬೆಳೆಸಿ ಮಾಡೆಲಿಂಗ್ ಉದ್ಯಮಕ್ಕೆ ಪರಿಚಯಿಸಿದರು. ಆರಂಭದಲ್ಲಿ ಆಕೆಯ ಚರ್ಮದ ಬಣ್ಣದಿಂದಾಗಿ ಅವಕಾಶಗಳನ್ನು ನಿರಾಕರಿಸಲಾಗಿದ್ದರೂ, ರಾಚೆಲ್ ತಾರತಮ್ಯದ ವಿರುದ್ಧ ಹೋರಾಡಿದ್ದು, ಆಕೆಯನ್ನು ಬೇಗನೆ ಪ್ರಸಿದ್ಧಿಯನ್ನಾಗಿಸಿತು.
ರಾಚೆಲ್ ಅವರು ಮಿಸ್ ಡಾರ್ಕ್ ಕ್ವೀನ್ ತಮಿಳುನಾಡು (2019), ಮಿಸ್ ಬೆಸ್ಟ್ ಆಟಿಟ್ಯೂಡ್ (2019), ಮಿಸ್ ಪುದುಚೇರಿ (2020/2021) ಮತ್ತು ಕ್ವೀನ್ ಆಫ್ ಮದ್ರಾಸ್ (2022, 2023) ಸೇರಿದಂತೆ ಹಲವಾರು ಪ್ರಾದೇಶಿಕ ಮತ್ತು ರಾಷ್ಟ್ರೀಯ ಸೌಂದರ್ಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ಮಿಸ್ ಆಫ್ರಿಕಾ ಗೋಲ್ಡನ್ ಇಂಡಿಯಾ (2023) ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದರು. ಅವರು ಹಲವಾರು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ರಾಚೆಲ್ ಮಾಡೆಲಿಂಗ್ ತರಬೇತಿ ಸಂಸ್ಥೆಯಾದ ರೋಸ್ ನಾಯ್ರ್ ಫ್ಯಾಷನ್ ಗ್ರೂಮಿಂಗ್‌ನ ಸ್ಥಾಪಕಿಯೂ ಆಗಿದ್ದರು. (ಏಜೆನ್ಸೀಸ್)