ಶಿಕ್ಷಣ ಮಾಧ್ಯಮವಾದರೆ ಸಾಲದು
ಕನ್ನಡ ಮಕ್ಕಳಿಗೆ;
ಕನ್ನಡ ಮಾಧ್ಯಮವಾಗಲೇ ಬೇಕು
ಮೊದಲೀ ಕವಿಗಳಿಗೆ,
ಕನ್ನಡ ಕವಿಗಳಿಗೆ.
ಇಂದಿನ ದೃಶ್ಯ ಮಾಧ್ಯಮಗಳ ಕಲುಷಿತ ಕಲಬೆರಕೆಯ ಕನ್ನಡಕ್ಕೂ ಕೆ.ಎಸ್.ನ. ಅವರ ಈ ಮಾತುಗಳು ಅನ್ವಯಿಸುತ್ತವೆ. ಅಡಿಗರು ಬಹುಮಟ್ಟಿಗೆ ಲೋಕಾಂತದ ಕವಿ. ಅವರಿಗೆ ಜನ ಬೇಕು. ಅದರಲ್ಲೂ ಯುವಜನ. ಹೀಗಾಗಿ ನನಗೆ ಅವರೊಂದಿಗೆ ನಿರಂತರ ಒಡನಾಟವಿತ್ತು, ಆತ್ಮೀಯ ಸಲುಗೆಯಿತ್ತು. ಆದರೆ ನರಸಿಂಹಸ್ವಾಮಿಯವರು ಬಹುಮಟ್ಟಿಗೆ ಏಕಾಂತದ ಕವಿ. ಅಡಿಗರದ್ದು ಮುಂದಾಳುತನದ ಏರುಧ್ವನಿಯಾದರೆ ನರಸಿಂಹಸ್ವಾಮಿಯವರದ್ದು ಸಂಕೋಚದ ಮೆಲುಧ್ವನಿ. ಹೀಗಾಗಿ ಕೆ.ಎಸ್.ನ. ಅವರೊಂದಿಗೆ ನನ್ನ ಒಡನಾಟ ತೀರಾ ಕಡಿಮೆ. ಆದರೆ ಕಾವ್ಯದ ವಿಚಾರಕ್ಕೆ ಬಂದರೆ ನನಗೆ ಅಡಿಗರಿಗಿಂತ ನರಸಿಂಹಸ್ವಾಮಿಯವರೇ ಹೆಚ್ಚು ಪ್ರಿಯ. ಏಕೆಂದರೆ ಅಡಿಗರು ಪಂಪನ ಹಾಗೆ ‘ಕವಿಗಳ ಕವಿ’ಯಾದರೆ ನರಸಿಂಹಸ್ವಾಮಿಯವರು ಕುಮಾರವ್ಯಾಸನಂತೆ ‘ಜನರ ಕವಿ’. ಅಡಿಗರದ್ದು ಕಾವ್ಯದಲ್ಲಿ ಗಣಿಗಾರಿಕೆಯಾದರೆ ನರಸಿಂಹಸ್ವಾಮಿಯವರದ್ದು ವ್ಯವಸಾಯ. ಅಡಿಗರು ‘ನೆಲತಾಯಿ, ಮಲತಾಯಿ’ ಎಂದರೆ ನರಸಿಂಹಸ್ವಾಮಿಯವರು ‘ಮುನ್ನೀರ ಮೇಲೆ ಕಣ್ಣೀರ ಸುರಿವ ತಾಯೆ/ ನೀನಲ್ಲ ಮಾಯೆ’ ಅನ್ನುತ್ತಾರೆ. ಹೀಗಾಗಿ ಪಂಡಿತರಿಗಷ್ಟೇ ಅಲ್ಲದೆ ಪಾಮರರಿಗೂ ಪ್ರಿಯರಾದ ಕವಿಯಾಗಿದ್ದಾರೆ ಕೆ.ಎಸ್.ನ.
ಭೂಮಿಯ ಕರುಣೆಗೆ ಮಿತಿ ಇರದೆಂದು,
ಎಲ್ಲರ ದುಡಿಮೆಗೆ ಫಲವಿಹುದೆಂದು,
ನಾಳೆಯ ಬಾಗಿಲು ನಂದನವೆಂದು,
ಪ್ರೀತಿಗೆ ಶಾಂತಿಗೆ ಜಯವಿರಲೆಂದು
ಎಲ್ಲರಿಗೊಳಿತನು ಬಯಸಲಿ ಕವನ.
ಎಂದ, ಜನಪ್ರೀತಿಯ ಕವಿ ಕೆ.ಎಸ್. ನರಸಿಂಹಸ್ವಾಮಿಯವರಿಗೆ ಅವರ ಜನ್ಮದಿನದಂದು ನನ್ನ ಪ್ರೀತಿಯ ನುಡಿ ನಮಸ್ಕಾರಗಳು.