ಕೊವಿಡ್-19 ಚಿಕಿತ್ಸೆಗೆ ಬಳಕೆಯಾಗುತ್ತಿರುವ ಆ್ಯಂಟಿ ಮಲೇರಿಯಾ ಔಷಧಿ ಹೈಡ್ರಾಕ್ಸಿಕ್ಲೊರಿಕ್ವಿನ್ ಬಗ್ಗೆ ಒಂದು ಧನಾತ್ಮಕ ವಿಚಾರವನ್ನು ಅಧ್ಯಯನವೊಂದು ಬಹಿರಮಗಪಡಿಸಿದೆ.
ಆಸ್ಪತ್ರೆಗಳಿಗೆ ದಾಖಲಾಗುವ ಕೊವಿಡ್-19 ರೋಗಿಗಳಿಗೆ ಹೈಡ್ರಾಕ್ಸಿಕ್ಲೊರಿಕ್ವಿನ್ನಿಂದ ಚಿಕಿತ್ಸೆ ನೀಡುವುದರಿಂದ ಅವರು ಸಾಯುವ ಸಂಭವ ತೀರ ಕಡಿಮೆ. ಹೈಡ್ರಾಕ್ಸಿಕ್ಲೊರಿಕ್ವಿನ್ ಸಾವಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ಹೇಳಿದೆ.
ಹೈಡ್ರಾಕ್ಸಿಕ್ಲೊರಿಕ್ವಿನ್ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲಿನಿಂದಲೂ ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದಾರೆ. ಅಲ್ಲದೆ ಭಾರತದಿಂದ ಆಮದು ಮಾಡಿಸಿಕೊಂಡು ಭರ್ಜರಿ ಪ್ರಚಾರ ಕೊಟ್ಟಿದ್ದಾರೆ. ಹೈಡ್ರಾಕ್ಸಿಕ್ಲೊರಿಕ್ವಿನ್ ಔಷಧಿ ಕೊವಿಡ್-19 ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಲ್ಲದು ಎಂದು ಹೇಳುತ್ತಲೇಬಂದಿದ್ದರು. ಈ ಮಧ್ಯೆ ಕೆಲವು ಯೂನಿವರ್ಸಿಟಿಗಳು ಹೈಡ್ರಾಕ್ಸಿಕ್ಲೊರಿಕ್ವಿನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದವು. ಇದರಿಂದ ರೋಗಿಗಳಲ್ಲಿ ಹೃದಯ ಸಂಬಂಧಿ ರೋಗ ಹೆಚ್ಚುತ್ತಿದೆ. ಹೃದಯಾಘಾತವಾಗಿ ಸಾಯುವ ಪ್ರಮಾಣ ಹೆಚ್ಚಾಗಿದೆ ಎಂದೂ ಹೇಳಿದ್ದರು. ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ಒಂದು ಇನ್ಸ್ಟಾಗ್ರಾಂ ಪೋಸ್ಟ್ಗೆ ಪಡೆಯುವ ಮೊತ್ತ ಎಷ್ಟಿರಬಹುದು?
ಇದೀಗ ಹೆನ್ರಿ ಫಾರ್ಡ್ ಹೆಲ್ತ್ ಸಿಸ್ಟಮ್ ನಡೆಸಿರುವ ಅಧ್ಯಯನದ ವರದಿಯನ್ನು ಪ್ರಕಟಿಸಲಾಗಿದ್ದು, ಅದರಲ್ಲಿ ಹೈಡ್ರಾಕ್ಸಿಕ್ಲೊರಿಕ್ವಿನ್ ಕೊವಿಡ್-19 ರೋಗಿಗಳ ಸಾವಿನ ಪ್ರಮಾಣವನ್ನು ಕಡಿತಗೊಳಿಸುತ್ತದೆ ಎಂದು ಹೇಳಿದೆ.
ಈ ಅಧ್ಯಯನ ಸುಮಾರು 2541 ಕೊವಿಡ್-19 ರೋಗಿಗಳನ್ನು ಒಳಗೊಂಡಿತ್ತು. ಮಾರ್ಚ್10 ರಿಂದ ಮೇ 22ರವರೆಗೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಒಟ್ಟು 2,541 ರೋಗಿಗಳ ಮೇಲೆ ಪ್ರಯೋಗ ನಡೆಸಲಾಗಿತ್ತು. ಒಂದಷ್ಟು ಜನರಿಗೆ ಹೈಡ್ರಾಕ್ಸಿಕ್ಲೊರಿಕ್ವಿನ್ ಚಿಕಿತ್ಸೆ ನಿಡಲಾಗಿದ್ದರೆ, ಇನ್ನೊಂದಷ್ಟು ಜನರಿಗೆ ಬೇರೆ ವಿಧದಲ್ಲಿ ಟ್ರೀಟ್ಮೆಂಟ್ ಕೊಡಲಾಗಿತ್ತು.
ಹೈಡ್ರಾಕ್ಸಿಕ್ಲೊರಿಕ್ವಿನ್ನಿಂದ ಚಿಕಿತ್ಸೆ ಪಡೆದವರಲ್ಲಿ ಸಾವಿನ ಪ್ರಮಾಣ ಶೇ.13ರಷ್ಟಿದ್ದರೆ, ಈ ಔಷಧಿಯ ಹೊರತಾಗಿ ಬೇರೆ ಚಿಕಿತ್ಸೆ ಪಡೆದವರಲ್ಲಿ ಸಾವಿನ ಪ್ರಮಾಣ ಶೇ.26ರಷ್ಟಿತ್ತು ಎಂದು ಅಧ್ಯಯನ ವರದಿ ತಿಳಿಸಿದೆ. ಅಷ್ಟೇ ಅಲ್ಲ, ಹೈಡ್ರಾಕ್ಸಿಕ್ಲೊರಿಕ್ವಿನ್ ಔಷಧಿ ತೆಗೆದುಕೊಂಡವರಲ್ಲಿ ಯಾವುದೇ ಹೃದಯಸಂಬಂಧಿ ಕಾಯಿಲೆಯಾಗಲೀ, ಸೈಡ್ ಎಫೆಕ್ಟ್ ಆಗಲಿ ಕಂಡು ಬಂದಿಲ್ಲ ಎಂದೂ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಫೇಸ್ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಅಗತ್ಯವಸ್ತುಗಳಲ್ಲ ಎಂದ ಕೇಂದ್ರ ಸರ್ಕಾರ
ಈ ಸಂಶೋಧನೆಯನ್ನು ಹೆಚ್ಚು ವಿಶ್ಲೇಷಿಸಲಾಗಿದೆ. ಹೈಡ್ರಾಕ್ಸಿಕ್ಲೊರಿಕ್ವಿನ್ನಿಂದ ಚಿಕಿತ್ಸೆ ನೀಡಿದರೆ ಮರಣ ಪ್ರಮಾಣ ತೀರ ಕಡಿಮೆ ಇರುತ್ತದೆ ಎಂದು ಹೆನ್ರಿ ಫಾರ್ಡ್ ಹೆಲ್ತ್ ಸಿಸ್ಟಂನ ಸಾಂಕ್ರಾಮಿಕ ಕಾಯಿಲೆ ವಿಭಾಗದ ಮುಖ್ಯಸ್ಥ ಡಾ. ಮಾರ್ಕಸ್ ಜೆರ್ವೋಸ್ ತಿಳಿಸಿದ್ದಾರೆ.
ಹೈಡ್ರಾಕ್ಸಿಕ್ಲೊರಿಕ್ವಿನ್ ಕೊವಿಡ್-19 ರೋಗಿಗಳ ಜೀವ ಉಳಿಸುತ್ತದೆ ಎಂಬುದು ನಮ್ಮ ಅಧ್ಯಯನದಿಂದ ಸಾಬೀತಾಗಿದೆ ಎಂದು ಹೆನ್ರಿ ಫಾರ್ಡ್ ಹೆಲ್ತ್ ಸಿಸ್ಟಂನ ಸಿಇಒ ಡಾ. ಸ್ಟೀವನ್ ಕಲ್ಕಾನಿಸ್ ಹೇಳಿದ್ದಾರೆ. (ಏಜೆನ್ಸೀಸ್)