ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಗೇಮಿಂಗ್ ಗೀಳಿಗೆ ಮಕ್ಕಳು ಹೆಚ್ಚು ಬಲಿಯಾಗುತ್ತಿದ್ದು, ಅವರ ತಂದೆ-ತಾಯಿಗಳ ಬ್ಯಾಂಕ್ ಖಾತೆಯಿಂದ ಅಪಾರ ಪ್ರಮಾಣದ ಹಣವನ್ನು ಹಾಳು ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಇದೀಗ ಪ್ರಕರಣ ಒಂದರಲ್ಲಿ ಬಾಲಕನೋರ್ವ ಆನ್ಲೈನ್ನಲ್ಲಿ ಗೇಮ್ ಆಡುವ ವೇಳೆ ತನ್ನ ತಾಯಿಯ ಬ್ಯಾಂಕ್ ಖಾತೆಯಿಂದ 36 ಲಕ್ಷ ರೂ. ಅನ್ನು ಕಳೆದಿರುವುದು ಬೆಳಕಿಗೆ ಬಂದಿದೆ. ಘಟನೆಯೂ ತೆಲಂಗಾಣದ ಹೈದರಾಬಾದಿನ ಅಂಬರ್ಪೇಟ್ನಲ್ಲಿ ನಡೆದಿದೆ.
11ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕನೋರ್ವ ತನ್ನ ತಾಯಿಯ ಮೊಬೈಲ್ ಫೋನ್ನಲ್ಲಿ ಫ್ರೀಫೈರ್ ಗೇಮ್ಅನ್ನು ಡೌನ್ಲೋಡ್ ಮಾಡಿ ಆಟ ಆಡಲು ಶುರು ಮಾಡಿದ್ದಾನೆ. ಆಟ ಆಡುವುದರಲ್ಲಿ ತಲ್ಲೀಣನಾಗಿದ್ದ, ಬಳಿಕ ಅಪ್ಗ್ರೇಡ್ ಆಗಲು ಹಣ ಪಾವತಿಸುವಂತೆ ಸೂಚಿಸಿದಾಗ ಆತ ಮೊತ್ತವನ್ನು ಸಂದಾಯ ಮಾಡುತ್ತ ಆಟ ಮುಂದುವರೆಸಿದ್ದಾನೆ. ಕೊನೆಯದಾಗಿ ತನ್ನ ತಾಯಿಯ ಎರಡು ಬ್ಯಾಂಕ್ ಖಾತೆಗಳಿಂದ 36 ಲಕ್ಷ ರೂಪಾಯಿಯನ್ನು ಕಳೆದಿದ್ದಾನೆ.
ಕೆಲ ದಿನಗಳ ಬಳಿಕ ಬಾಲಕನ ತಾಯಿಯೂ ಖಾತೆಯಿಂದ ಹಣ ಬಿಡಿಸಲು ಹೋದಾಗ ಕೃತ್ಯ ಬೆಳಕಿಗೆ ಬಂದಿದ್ದು, ಈ ಬಗ್ಗೆ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಹೈದರಾಬಾದ್ ಸೈಬರ್ ಕ್ರೈಂ ಅಧಿಕಾರಿಯೊಬ್ಬರು ಹುಡುಗ ಮೊದಲಿಗೆ ಫ್ರೀಫೈರ್ ಗೇಮ್ಅನ್ನು ತನ್ನ ತಾಯಿಯ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿ ಆಟವಾಡಲು ಶುರು ಮಾಡಿದ್ದಾನೆ. ಗೇಮಿಂಗ್ ಲೆವೆಲ್ ಹೆಚ್ಚಾಗುತ್ತ ಹೋದಂತೆ ಹಣ ಕಟ್ಟಿ ಅಪ್ಗ್ರೇಡ್ ಆಗುವಂತೆ ಆ್ಯಪ್ನಲ್ಲಿ ಸೂಚಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆಟದಲ್ಲಿ ತಲ್ಲೀಣನಾಗಿದ್ದ ಬಾಲಕ ಕೊನೆಯದಾಗಿ 36 ಲಕ್ಷ ರೂಗಳನ್ನು ಗೇಮ್ ಆಡುವ ಸಲುವಾಗಿ ಕಳೆದಿದ್ದಾನೆ. ಮಹಿಳೆಯ ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, ಈ ರೀತಿಯ ಅಪ್ಲಿಕೇಷನ್ಗಳನ್ನು ಬ್ಯಾನ್ ಮಾಡುವಂತೆ ದೂರುದಾರರು ಒತ್ತಾಯಿಸಿದ್ದಾರೆ. ಬಾಲಕನ ತಂದೆ ಪೊಲೀಸ್ ಅಧಿಕಾರಿಯಾಗಿದ್ದರು ಅವರ ನಿಧನದ ನಂತರ ಬಂದಿದ್ದ ಪರಿಹಾರ ಮೊತ್ತ ಇದಾಗಿದೆ ಎಂದು ಸೈಬರ್ ಕ್ರೈಂ ಅಧಿಕಾರಿ ತಿಳಿಸಿದ್ದಾರೆ.