ನ್ಯೂಸ್

ಅನ್ಯರಿಗೆ ಬಣ್ಣ ಹಾಕುವಂತಿಲ್ಲ, ಗುಂಪುಗಳಲ್ಲಿ ಕಾಣಿಸುವಂತಿಲ್ಲ! ಇದು 'ತುಘಲಕ್​ ಆದೇಶ', ಖಾಕಿ ನಿರ್ಬಂಧಕ್ಕೆ ಬಿಜೆಪಿ ಶಾಸಕ ಕಿಡಿ | Holi

Holi Restrictions: ದೇಶಾದ್ಯಂತ ನಾಳೆ (ಮಾ.14) ಬಣ್ಣಗಳ ಹಬ್ಬ ಹೋಳಿಯನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಹಲವರು ಈಗಾಗಲೇ ತಮ್ಮ ತಮ್ಮ ಮನೆಗಳನ್ನು ಸಿಂಗಾರಗೊಳಿಸಿ, ಬಣ್ಣಗಳನ್ನು ತಂದಿಟ್ಟಿದ್ದಾರೆ. ಬಣ್ಣಗಳ ಓಕುಳಿಗೆ ಸಜ್ಜಾಗಿದ್ದಾರೆ. ಈ ಮಧ್ಯೆ ಹೈದರಾಬಾದ್ ಪೊಲೀಸರು ಹೋಳಿ ಆಚರಣೆಗೆ ಒಂದಷ್ಟು ನಿರ್ಬಂಧಗಳನ್ನು ವಿಧಿಸಿದ್ದಾರೆ. ಸದ್ಯ ಇದೇ ಈಗ ವಿವಾದಕ್ಕೆ ದಾರಿಯಾಗಿದ್ದು, ಅಲ್ಲಿನ ಬಿಜೆಪಿ ಶಾಸಕನ ಆಕ್ರೋಶಕ್ಕೆ ಕಾರಣವಾಗಿದೆ.

'ತುಘಲಕ್ ಆದೇಶ'

ಹಬ್ಬವನ್ನು ಎಲ್ಲರೊಂದಿಗೂ ಸಂಭ್ರಮಿಸುವ ಉತ್ಸಾಹದಲ್ಲಿದ್ದ ಹೈದರಾಬಾದ್​ ಮಂದಿಗೆ ನಗರ ಪೊಲೀಸರು ಬೇಸರ ಮೂಡಿಸಿದ್ದಾರೆ. ಗುಂಪಿನಲ್ಲಿ ವಾಹನ ಸಂಚರಿಸುವುದು, ಪರಿಚಯವಿಲ್ಲದ ವ್ಯಕ್ತಿಗಳ ಮೇಲೆ ಬಣ್ಣಗಳನ್ನು ಎರಚುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಹೈದರಾಬಾದ್​ ಪೊಲೀಸರು ತಿಳಿಸಿದ್ದಾರೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಪೊಲೀಸರ ಈ ನಡೆಯನ್ನು ಖಂಡಿಸಿರುವ ಬಿಜೆಪಿ ಶಾಸಕ ರಾಜಾ ಸಿಂಗ್, ಇದೊಂದು 'ತುಘಲಕ್ ಆದೇಶ' ಎಂದು ಕಿಡಿಕಾರಿದ್ದಾರೆ.

ಪೊಲೀಸ್ ಅಧಿಸೂಚನೆಯಲ್ಲಿ, ದ್ವಿಚಕ್ರ ವಾಹನಗಳು ಮತ್ತು ಇತರ ವಾಹನಗಳು ಬೀದಿ, ರಸ್ತೆಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು, ಗುಂಪಾಗಿ ಚಲಿಸುವಂತಿಲ್ಲ. ಇದರೊಟ್ಟಿಗೆ ಬಣ್ಣ ಹಚ್ಚುವ ನೆಪದಲ್ಲಿ ಶಾಂತಿಯನ್ನು ಕದಡುವುದು, ಕಿರಿಕಿರಿ ಉಂಟುಮಾಡುವುದು ಅಥವಾ ಅಪಾಯ ತಂದೊಡ್ಡುವುದು, ಇಷ್ಟವಿಲ್ಲದ ವ್ಯಕ್ತಿಗಳು, ಸ್ಥಳಗಳು ಅಥವಾ ವಾಹನಗಳ ಮೇಲೆ ಬಣ್ಣದ ಪುಡಿ ಅಥವಾ ಬಣ್ಣದ ನೀರನ್ನು ಎರೆಚುವುದು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಇಷ್ಟವಿಲ್ಲದ ವ್ಯಕ್ತಿಗಳಿಗೆ ಬಲವಂತವಾಗಿ ಬಣ್ಣ ಬಳಿಯುವುದನ್ನು ನಿರ್ಬಂಧಿಸಲಾಗಿದೆ ಎಂದು ಉಲ್ಲೇಖವಾಗಿದೆ.

9ನೇ ನಿಜಾಮ ರೇವಂತ್ ರೆಡ್ಡಿ

"ಕಾಂಗ್ರೆಸ್ ಸರ್ಕಾರದ ಆದೇಶದ ಮೇರೆಗೆ ಈ ನಿರ್ಬಂಧವನ್ನು ಹೇರಲಾಗಿದೆ. ನಾನು ಮುಖ್ಯಮಂತ್ರಿ ಮತ್ತು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸುವುದು ಇಷ್ಟೇ. ರಂಜಾನ್‌ನ 30 ದಿನಗಳಲ್ಲಿ, ಜನರು ರಾತ್ರಿಯಲ್ಲಿ ಬೈಕ್‌ಗಳಲ್ಲಿ ಮತ್ತು ಗುಂಪುಗಳಲ್ಲಿ ಹೇಗೆ ಓಡಾಡುತ್ತಾರೆ? ಇದು ತೆಲಂಗಾಣದ ಒಂಬತ್ತನೇ ನಿಜಾಮ ರೇವಂತ್ ರೆಡ್ಡಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಗೊತ್ತಿಲ್ಲವೇ? ಈ 30 ದಿನಗಳಲ್ಲಿ ಹೈದರಾಬಾದ್‌ನಲ್ಲಿ ಎಷ್ಟು ತೊಂದರೆ ಸಂಭವಿಸುತ್ತದೆ?" ಎಂದು ಆಕ್ರೋಶ ಹೊರಹಾಕಿದ್ದಾರೆ.

ಹಿಂದೂಗಳ ಮೇಲೆ ಇಂತಹ ನಿರ್ಬಂಧಗಳನ್ನು ವಿಧಿಸುವ ಬದಲು, ಹೋಳಿಯ ಸಮಯದಲ್ಲಿ ಮುಸ್ಲಿಮರು ರಸ್ತೆಗಳಲ್ಲಿ ಓಡಾಡದಂತೆ ಒಂದು ದಿನ ಸಹಕರಿಸುವಂತೆ ಸರ್ಕಾರ ಮನವಿ ಮಾಡಬಹುದಿತ್ತು. ಆದಾಗ್ಯೂ, ಸರ್ಕಾರ ಹಿಂದೂಗಳ ವಿರುದ್ಧ ಕ್ರಮ ಕೈಗೊಳ್ಳಲು ಆಯ್ಕೆ ಮಾಡಿದೆ. ಇಂತಹ ನೀತಿಗಳನ್ನು ಮರುಪರಿಶೀಲಿಸುವಂತೆ ಸಿಎಂ ರೇವಂತ್​ ರೆಡ್ಡಿಯನ್ನು ಒತ್ತಾಯಿಸಿದ್ದಾರೆ,(ಏಜೆನ್ಸೀಸ್).