ಅಕ್ರಮ ಸಂಬಂಧಕ್ಕೆ ಅಡ್ಡ ಬಂದ ಪತಿ ಹತ್ಯೆ 
ನ್ಯೂಸ್

ಬೆಂಗಳೂರಿನಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡ ಬಂದ ಪತಿ ಹತ್ಯೆ: ಹಾರ್ಟ್ ಅಟ್ಯಾಕ್ ನಾಟಕವಾಡಿದ್ದ ಹೆಂಡತಿ, ಪ್ರಿಯಕರ ಅರೆಸ್ಟ್! | Husband Murder

ಪತಿಯನ್ನೇ ಕೊಲೆ ಮಾಡಿ ಹಾರ್ಟ್ ಅಟ್ಯಾಕ್ ಎಂದು ಬಿಂಬಿಸಿ ತಿಂಗಳ ಬಳಿಕ ಸಿಕ್ಕಿಬಿದ್ದ ಪತ್ನಿ

ಬಾತ್ರೂಮ್‌ನಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ್ದಾರೆಂದು ಕಥೆ ಕಟ್ಟಿ ಪೊಲೀಸರ ಹಾದಿ ತಪ್ಪಿಸಲು ಯತ್ನ

ಪೋಸ್ಟ್‌ಮಾರ್ಟಮ್ ವರದಿ ಮತ್ತು ಪೊಲೀಸರ ತೀವ್ರ ವಿಚಾರಣೆ ವೇಳೆ ಸತ್ಯ ಬಯಲು

Illegal relationship murder: ಅಕ್ರಮ ಸಂಬಂಧದ ವ್ಯಾಮೋಹಕ್ಕೆ ಬಿದ್ದು ಪತಿಯನ್ನೇ ಪ್ರಿಯಕರನ ಜತೆ ಸೇರಿ ಭೀಕರವಾಗಿ ಹತ್ಯೆಗೈದಿದ್ದ ಕಿರಾತಕ ಪತ್ನಿ ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ಕೊಲೆ ಮಾಡಿ, ಅದನ್ನು ಹೃದಯಾಘಾತ ಎಂದು ನಂಬಿಸಿ ನಾಟಕವಾಡಿದ್ದ ಈ ಜೋಡಿಯ ರಹಸ್ಯವನ್ನು ಬೆಂಗಳೂರು ಪೊಲೀಸರು ಸುಮಾರು ಒಂದು ತಿಂಗಳ ತನಿಖೆಯ ಬಳಿಕ ಬಯಲಿಗೆಳೆದಿದ್ದಾರೆ.

ಬೆಂಗಳೂರಿನ ದೊಡ್ಡತೋಗೂರಿನ ನಿವಾಸಿ ಉಪೇಂದ್ರ (41) ಎಂಬುವರು ಅಕ್ಟೋಬರ್ 12 ರಂದು ನಿಗೂಢವಾಗಿ ಮೃತಪಟ್ಟಿದ್ದರು. ಆರಂಭದಲ್ಲಿ, 'ನನ್ನ ಅಣ್ಣ ಬಾತ್ರೂಮ್‌ಗೆ ಹೋಗುವಾಗ ಜಾರಿ ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ' ಎಂದು ಉಪೇಂದ್ರ ಅವರ ಸಹೋದರ ನೀಡಿದ್ದ ದೂರಿನನ್ವಯ ಪೊಲೀಸರು ಅಸಹಜ ಸಾವು (UDR) ಪ್ರಕರಣ ದಾಖಲಿಸಿಕೊಂಡಿದ್ದರು.

ಸಂಶಯ ತಂದ ಪೋಸ್ಟ್‌ಮಾರ್ಟಮ್ ವರದಿ

ಮರಣೋತ್ತರ ಪರೀಕ್ಷೆ (Post-mortem) ವರದಿ ಕೈಸೇರುತ್ತಿದ್ದಂತೆ ಪೊಲೀಸರಿಗೆ ಸಾವಿನ ಬಗ್ಗೆ ತೀವ್ರ ಅನುಮಾನ ಮೂಡಿದೆ. ತಕ್ಷಣವೇ ತನಿಖೆ ಚುರುಕುಗೊಳಿಸಿದ ಪೊಲೀಸರು, ನವೆಂಬರ್ 5 ರಂದು ಮಧುಸೂದನ್ ರೆಡ್ಡಿ (46) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಸತ್ಯ ಬಯಲು

ಪೊಲೀಸರ ಬಿಗಿಯಾದ ವಿಚಾರಣೆ ವೇಳೆ ಮಧುಸೂದನ್ ರೆಡ್ಡಿ ಕೊಲೆಯಾದ ಉಪೇಂದ್ರ ಅವರ ಪತ್ನಿ ಅನಿತಾ (36) ಜೊತೆ ಅಕ್ರಮ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ವಿಷಯ ಉಪೇಂದ್ರ ಅವರಿಗೆ ತಿಳಿದು, ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. ತಮ್ಮ ಅಕ್ರಮ ಸಂಬಂಧಕ್ಕೆ ಉಪೇಂದ್ರ ಅಡ್ಡಲಾಗುತ್ತಾನೆ ಎಂಬ ಕಾರಣಕ್ಕೆ ಇಬ್ಬರೂ ಸೇರಿ ಆತನನ್ನು ಮುಗಿಸಲು ಸಂಚು ರೂಪಿಸಿದ್ದರು.

ಇದನ್ನೂ ಓದಿ: Abhishek Sharma: 'ಓ ಮೈ ಗಾಡ್': ದೀಪಾವಳಿ ಹಬ್ಬಕ್ಕೆ ಶಾಲೆ ಟೀಚರ್‌ಗೆ ವಿಶ್ ಮಾಡಿ ಸರ್‌ಪ್ರೈಸ್ ನೀಡಿದ ಅಭಿಷೇಕ್ ಶರ್ಮಾ!

ಉಪೇಂದ್ರ ಅವರ ಬಾಯಿ-ಮೂಗು ಮುಚ್ಚಿ ಕೊಲೆಗೈದಿದ್ದ ಆರೋಪಿಗಳು, ಅದನ್ನು ಹಾರ್ಟ್ ಅಟ್ಯಾಕ್ ಎಂದು ನಂಬಿಸಲು ಯತ್ನಿಸಿದ್ದರು. ತನಿಖೆ ವೇಳೆ ಪ್ರಿಯಕರ ನೀಡಿದ ಸುಳಿವಿನ ಮೇರೆಗೆ ನವೆಂಬರ್ 6ರಂದು ಪತ್ನಿ ಅನಿತಾಳನ್ನು ಬಂಧಿಸಿರುವ ಪೊಲೀಸರು, ಅಸಹಜ ಸಾವು ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿ 7 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.