Murder: ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಳು ಎಂಬ ಅನುಮಾನವನ್ನು ತಲೆಗೇರಿಸಿಕೊಂಡಿದ್ದ ಪತಿ, ಶಂಕೆಯಿಂದಲೇ ಆಕೆಯನ್ನು ಭೀರಕವಾಗಿ ಸುತ್ತಿಗೆಯಿಂದ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಮದ್ಯದ ನಶೆಯಲ್ಲಿ ಕಾರು ಚಲಾಯಿಸಿಲ್ಲ! FSL ವರದಿಯಲ್ಲಿ ಬಯಲಾಯ್ತು ಶಾಕಿಂಗ್ ಸಂಗತಿ | Vadodara Car Crash
ಪೊಲೀಸರ ಪ್ರಕಾರ, ಆರೋಪಿ ನೂರುಲ್ಲಾ ಹೈದರ್ (55) ತನ್ನ ಪತ್ನಿ ಅಸ್ಮಾ ಖಾನ್ (42) ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಘಟನೆ ಶುಕ್ರವಾರ (ಏ.04) ನೋಯ್ಡಾದ ಸೆಕ್ಟರ್ 15ರ ಪ್ರದೇಶದಲ್ಲಿ ಸಂಭವಿಸಿದೆ. ಮೃತ ಮಹಿಳೆ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ನೋಯ್ಡಾದ ಸೆಕ್ಟರ್ 62ರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ದಂಪತಿ ಮೊದಲು ದೆಹಲಿಯಲ್ಲಿ ವಾಸವಿದ್ದರು. ನಂತರದಲ್ಲಿ ನೋಯ್ಡಾಗೆ ತೆರಳಿದ್ದರು. ಆರೋಪಿ ಪತಿ ಮೂಲತಃ ಬಿಹಾರದವನಾಗಿದ್ದು, ಎಂಜಿನಿಯರಿಂಗ್ ಪದವಿಧರ. ಆದರೆ, ಉದ್ಯೋಗವಿಲ್ಲದೆ ಮನೆಯಲ್ಲೇ ಇದ್ದ.
ಪ್ರಕರಣ ಕುರಿತಾಗಿ ಮಾತನಾಡಿದ ಪೊಲೀಸ್ ಅಧಿಕಾರಿಯೊಬ್ಬರು, "ದಂಪತಿಗಳಿಗೆ ಇಬ್ಬರು ಮಕ್ಕಳು. ಒಬ್ಬ ಮಗ ಮತ್ತು ಮಗಳು. ಆರೋಪಿ ಹೈದರ್ ತನ್ನ ಪತ್ನಿಯ ಶೀಲ ಶಂಕಿಸಿ, ಆಕೆಯನ್ನು ಸುತ್ತಿಗೆಯಿಂದ ಹತ್ಯೆಗೈದಿದ್ದಾನೆ. ಅವರ ಮಗ ನಮಗೆ ದೂರವಾಣಿ ಕರೆ ಮಾಡಿ ಘಟನೆಯನ್ನು ವಿವರಿಸಿದರು. ತಕ್ಷಣವೇ ನಾವು ಸ್ಥಳಕ್ಕೆ ಭೇಟಿ ನೀಡಿ, ಆರೋಪಿಯನ್ನು ವಶಕ್ಕೆ ಪಡೆದೆವು" ಎಂದಿದ್ದಾರೆ.
ಇಂದು (ಏ.05) ಬೆಳಗ್ಗೆ ದಂಪತಿ ಪುತ್ರಿ ತಾಯಿ ಕೊಲೆ ಬಗ್ಗೆ ಮಾಹಿತಿ ನೀಡಿದ್ದಾರೆ. "ಅದೊಂದು ವಿಷಯಕ್ಕೆ ಹಲವು ದಿನಗಳಿಂದ ತಂದೆ-ತಾಯಿ ಮಧ್ಯೆ ವಿಪರೀತ ಜಗಳ ನಡೆಯುತ್ತಿತ್ತು. ಆದರೆ, ತಾಯಿಯನ್ನು ಕೊಲೆ ಮಾಡುವ ಹಂತಕ್ಕೆ ಹೋಗುತ್ತಾರೆ ಎಂದು ಊಹೆಯೂ ಮಾಡಿರಲಿಲ್ಲ" ಎಂದು ಪುತ್ರಿ ಹೇಳಿರುವುದಾಗಿ ವರದಿಯಾಗಿದೆ,(ಏಜೆನ್ಸೀಸ್).