ನ್ಯೂಸ್

ಗರ್ಭಿಣಿ ಪತ್ನಿಯನ್ನು ಕೊಂದು, ದೇಹದ ಭಾಗಗಳನ್ನು ಕತ್ತರಿಸಿ ನದಿಗೆ ಎಸೆದ ಪತಿ| Hydarabad

ಹೈದರಾಬಾದ್: ಐದು ತಿಂಗಳ ಗರ್ಭಿಣಿ ಮಹಿಳೆಯನ್ನು ಆಕೆಯ ಪತಿಯೇ ಕ್ರೂರವಾಗಿ ಕೊಲೆ ಮಾಡಿ, ಬಳಿಕ ಆಕೆಯ ದೇಹದ ಭಾಗಗಳನ್ನು ಕತ್ತರಿಸಿ, ಮೂಸಿ ನದಿಗೆ ಎಸೆದಿರುವ ಘಟನೆ ಮೆಡಿಪಲ್ಲಿಯಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತ ಮಹಿಳೆಯನ್ನು 21 ವರ್ಷದ ಸ್ವಾತಿ ಅಲಿಯಾಸ್ ಜ್ಯೋತಿ ಎನ್ನಲಾಗಿದ್ದು, ಆರೋಪಿ ಪತಿಯನ್ನು ಮಹೇಂದರ್ ರೆಡ್ಡಿ ಎಂದು ಗುರುತಿಸಲಾಗಿದೆ. ದಂಪತಿಗಳಿಬ್ಬರೂ ಕೂಡ ಮೆಡಿಪಲ್ಲಿಯ ಬೋಡುಪ್ಪಲ್‌ನಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗಿದೆ. ಶನಿವಾರ ಸಂಜೆ 4.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ರೈಡ್ ಹೇಲಿಂಗ್ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ಆರೋಪಿ, ಕೌಟುಂಬಿಕ ಕಲಹಗಳಿಂದಾಗಿ ಆಗಾಗ್ಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಇನ್ನೂ ಈ ಕಲಹ ವಿಕೋಪಕ್ಕೆ ತಿರುಗಿದ ಪರಿಣಾಮ, ಪತ್ನಿಯ ಕುತ್ತಿಗೆ ಹಿಸುಕಿ ಆತ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ. ನಂತರ ಸಾಕ್ಷ್ಯವನ್ನು ಮರೆಮಾಡಲು ಹೆಕ್ಸಾ ಬ್ಲೇಡ್ ಬಳಸಿ ದೇಹವನ್ನು ತುಂಡುಗಳಾಗಿ ಕತ್ತರಿಸಿ ತಲೆ, ಕೈಗಳು ಮತ್ತು ಕಾಲುಗಳನ್ನು ಪ್ರತಾಪ್ಸಿಂಗಾರಂನಲ್ಲಿರುವ ಮುಸಿ ನದಿಗೆ ಎಸೆದು ವಿಲೇವಾರಿ ಮಾಡಿದನು ಎಂದು ಪೊಲೀಸರು ತಿಳಿಸಿದ್ದಾರೆ.

(ಏಜೆನ್ಸೀಸ್)

ಛಿದ್ರಗೊಂಡ ಶವವನ್ನು ಮನೆಯಲ್ಲಿ ಪತ್ತೆ ಮಾಡಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತ ವ್ಯಕ್ತಿ ಆರೋಪಿಯ ಪತ್ನಿಯೇ ಎಂದು ನಾವು ಖಚಿತಪಡಿಸಿಕೊಳ್ಳಬೇಕು ಮತ್ತು ಡಿಎನ್ಎ ಪರೀಕ್ಷೆ ನಡೆಸಲಾಗುವುದು. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಇದರ ಜೊತೆಗೆ ಮನೆಯಲ್ಲೂ ಕೆಲವು ದೇಹದ ಭಾಗಗಳು ಪತ್ತೆಯಾಗಿದ್ದು, ನದಿಯಲ್ಲಿ ಉಳಿದ ಭಾಗಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆರೋಪಿ ತನ್ನ ಸಹೋದರಿಗೆ ಕರೆ ಮಾಡಿ ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ತಿಳಿಸಿದಾಗ, ಆಕೆ ಅನುಮಾನಗೊಂಡು ಸಂಬಂಧಿಕರಿಗೆ ತಿಳಿಸಿದ್ದಾಳೆ. ಅವರು ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಈ ಸಮಯದಲ್ಲಿ ಆತ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.