ನ್ಯೂಸ್

ಮಧ್ಯರಾತ್ರಿ ಪತ್ನಿಯನ್ನು ಕೊಂದು ಪೊಲೀಸ್​ ಠಾಣೆಗೆ ಬಂದ ಭೂಪ!

ಹಾಸನ: ನಿನ್ನೆ(ಶುಕ್ರವಾರ) ಮಧ್ಯರಾತ್ರಿ ಪತ್ನಿಯ ಕುತ್ತಿಗೆಗೆ ವೇಲ್​ನಿಂದ ಬಿಗಿದು ಕೊಂದ ಪತಿ ಬಳಿಕ ತಾನಾಗೇ ಪೊಲೀಸ್​ ಠಾಣೆಗೆ ಬಂದು ತಪ್ಪೊಪ್ಪಿಕೊಂಡಿದ್ದಾನೆ.

ಎಸ್.ಎಂ. ಕೃಷ್ಣನಗರ ಬಡಾವಣೆಯ ಕಾಲನಿಯಲ್ಲಿ ಈ ಘಟನೆ ನಡೆದಿದ್ದು, ನಯನ (32) ಮೃತಳು. ಆರೋಪಿ ಲೋಹಿತ್ ಕುಮಾರ್​ ಪೊಲೀಸರ ವಶದಲ್ಲಿದ್ದಾನೆ. ದಂಪತಿಯ ಇಬ್ಬರು ಮಕ್ಕಳೀಗ ಅನಾಥವಾಗಿವೆ. ಅಷ್ಟಕ್ಕೂ ಆ ರಾತ್ರಿ ಏನಾಯ್ತು ಗೊತ್ತಾ? ಇದನ್ನೂ ಓದಿರಿ ಮಂಗಳಮುಖಿ ಆಗಲು ಹೊರಟಿದ್ದ ಬಾಲಕನ ಬದುಕಲ್ಲಿ ರೋಚಕ ತಿರುವು!

ಚಿತ್ರದುರ್ಗ ಮೂಲದ ಕಾರು ಚಾಲಕ ಲೋಹಿತ್​ ಕುಮಾರ್​ ಜತೆ ನಯನಾ ಮದುವೆ 16 ವರ್ಷದ ಹಿಂದೆ ನಡೆದಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆರಂಭದಲ್ಲಿ ಚೆನ್ನಾಗಿಯೇ ನಡೆದುಕೊಂಡು ಹೋಗುತ್ತಿದ್ದ ಸಂಸಾರದಲ್ಲಿ ಕೆಲ ವರ್ಷಗಳಿಂದ ಬಿರುಕು ಮೂಡಿತ್ತು. ಪತ್ನಿ ಮೇಲೆ ಲೋಹಿತ್ ಅನೈತಿಕ ಸಂಬಂಧದ ಆರೋಪ ಹೊರಿಸಿದ್ದ. ಈ ಕುರಿತು ಮನೆಯಲ್ಲಿ ಆಗಾಗ ಜಗಳಾಡುತ್ತಿದ್ದರು ಎನ್ನಲಾಗಿದೆ.

ಶುಕ್ರವಾರ ರಾತ್ರಿ 1.30ರ ಸಮಯದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದ್ದು, ನಯನಾಳ ಕುತ್ತಿಗೆಗೆ ವೇಲ್‌ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ. ನಂತರ ತಾನಾಗಿಯೇ ಪೊಲೀಸ್ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡಿದ್ದಾನೆ. ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.