ನ್ಯೂಸ್

ಸ್ವಂತ ಹೆಂಡತಿಯ ಬಾತ್​ರೂಮ್ ಹಾಗೂ ಬೆಡ್​ರೂಮ್​ಗೆ ಸಿಸಿಟಿವಿ ಅಳವಡಿಸಿದ ಭೂಪ!

ಛತ್ತರ್‌ಪುರ: ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು, ನನ್ನ ಪತಿ ನಾನು ಮಲಗುವ ಕೋಣೆ ಹಾಗೂ ಶೌಚಾಲಯದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾಳೆ. ಮಹಿಳೆಯ ಈ ಆರೋಪ ಕೇಳಿ ಪೊಲೀಸರೂ ಕಂಗಾಲಾಗಿದ್ದಾರೆ.

ಈ ಘಟನೆಯು ಛತ್ತರ್‌ಪುರದ ಸೀತಾರಾಮ್ ಕಾಲೋನಿಯಲ್ಲಿ ನಡೆದಿದ್ದು, ವೃತ್ತಿಯಿಂದ ಶಿಕ್ಷಕನಾಗಿರುವ ರಾಜೇಶ್ (ಹೆಸರು ಬದಲಿಸಲಾಗಿದೆ) ಮುಕರ್ವ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಪತ್ನಿ ಮೀನಾ ಶರ್ಮಾ(ಹೆಸರು ಬದಲಾಯಿಸಲಾಗಿದೆ) ಎಂಬುವರೇ ಗಂಡನ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೇ, ಈಗಾಗಲೇ ಇವರ ವಿಚ್ಛೇಧನ ಪ್ರಕರಣವು ನ್ಯಾಯಲಯದಲ್ಲಿದ್ದು, ಗಂಡ ಹೆಂಡತಿ ಇಬ್ಬರೂ ಒಂದೇ ಮನೆಯಲ್ಲಿದ್ದು ಬೇರೆ ಬೇರೆ ಕೋಣೆಗಳಲ್ಲಿ ವಾಸವಾಗಿದ್ದಾರೆ.

ನನ್ನ ಮಲಗುವ ಕೋಣೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಮನೆಯ ಎಲ್ಲಾ ಚಲನ-ವಲನಗಳನ್ನು ರೆಕಾರ್ಡ್ ಮಾಡುತ್ತಾರೆ. ನನಗೆ ಮನೆಯಲ್ಲಿ ಇರಲು ಕಷ್ಟವಾಗುತ್ತಿದೆ. ಈಗ ವಾಸವಾಗಿರುವ ಮನೆಯನ್ನು ನಾನು ಹಾಗೂ ನನ್ನ ಮಕ್ಕಳು ಬಿಟ್ಟು ಹೋಗಬೇಕೆಂದೇ ನನ್ನ ಪತಿ ಪರೋಕ್ಷವಾಗಿ ಕಿರುಕುಳ ನೀಡಲಾರಂಭಿಸಿದ್ದಾರೆ. ಏಕೆಂದರೆ ಆತ ಬೇರೆ ಮದುವೆಯಾಗುವ ಯೋಜನೆ ಮಾಡಿದ್ದಾನೆ ಎಂದು ಮೀನಾ ಆರೋಪಿಸಿದ್ದಾರೆ.

ಪೊಲೀಸರು ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಆಕೆಯ ಪತಿಯನ್ನು ಕೂಲಂಕಷವಾಗಿ ವಿಚಾರಣೆ ನಡೆಸಲಾಗುವುದು ಎಂದಿದ್ದಾರೆ. (ಏಜೆನ್ಸೀಸ್​)