ನವದೆಹಲಿ: ಸ್ಮಾರ್ಟ್ಫೋನ್ಗಳ ವಿಪರೀತ ಬಳಕೆ ದಾಂಪತ್ಯ ಸಂಬಂಧದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ. ಸ್ಮಾರ್ಟ್ಫೋನ್ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಪರಿಣಮಿಸಿದ್ದರೂ , ಅದರ ಮಿತಿಮೀರಿದ ಬಳಕೆಯಿಂದಾಗಿ ಸತಿ-ಪತಿ ಬಾಂಧವ್ಯ ಕೆಡುತ್ತಿದೆ ಎಂದು ಬೆಂಗಳೂರು ಸಹಿತ ದೇಶದ ಹಲವು ಪ್ರಮುಖ ನಗರಗಳಲ್ಲಿ ನಡೆಸಿದ ಸಮೀಕ್ಷೆ ಹೇಳಿದೆ. ಅದರಲ್ಲೂ ಶೇಕಡ 88ರಷ್ಟು ಸಮೀಕ್ಷಿತರು ಸ್ಮಾರ್ಟ್ಫೋನ್ಗಳ ಬಳಕೆಯ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆ ಸಂಘಟಿಸಿದ್ದ ವಿವೋ ಸಂಸ್ಥೆ ಸೋಮವಾರ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿದೆ. ಸೈಬರ್ವಿುೕಡಿಯಾ ರೀಸರ್ಚ್ ಸಂಸ್ಥೆಯೊಂದಿಗೆ ಸೇರಿಕೊಂಡು ‘ಸ್ವಿಚ್ ಆಫ್’ ಶೀರ್ಷಿಕೆಯಡಿ ಈ ಅಧ್ಯಯನ ನಡೆಸಿತ್ತು.
‘ಸ್ಮಾರ್ಟ್ಫೋನ್ಗಳು ಮತ್ತು ಮಾನವ ಸಂಬಂಧಗಳ ಮೇಲೆ ಅವುಗಳ ಪರಿಣಾಮಗಳು-2022’ ಎನ್ನುವುದು ಅಧ್ಯಯನದ ವಿಷಯವಾಗಿತ್ತು. ದಾಂಪತ್ಯ ಸಂಗಾತಿಯೊಂದಿಗೆ ಸಮಯ ಕಳೆಯುತ್ತಿರುವಾಗಲೂ ತಾವು ಫೋನ್ ಬಳಸುತ್ತಿರುವುದಾಗಿ ಶೇಕಡ 67 ಜನರು ತಪ್ಪೊಪ್ಪಿಕೊಂಡಿದ್ದಾರೆ. ಆದರೆ, ಸಂಗಾತಿ ಜತೆ ಸಮಯ ಕಳೆಯಲು ಸಾಧ್ಯ ಇರುವುದಕ್ಕಿಂತಲೂ ಕಡಿಮೆ ವೇಳೆಯನ್ನು ವ್ಯಯಿಸುತ್ತಿರುವುದಾಗಿ ಶೇ.89ರಷ್ಟು ಜನರು ಹೇಳಿದ್ದಾರೆ.
1.5 ತಾಸಷ್ಟೇ ಬಿಡುವು: ಪ್ರತಿ ಸ್ಮಾರ್ಟ್ಫೋನ್ ಬಳಕೆದಾರರಿಗೆ ದೈನಿಕ 1.5 ಗಂಟೆ ಬಿಡುವಿನ ವೇಳೆ ದೊರೆಯುತ್ತದೆ. ಅವರಲ್ಲಿ ಬಹಳಷ್ಟು ಜನರು ಕುಟುಂಬದೊಂದಿಗೆ ಸಮಯ ಕಳೆಯಲು ಬಯಸುತ್ತಾರೆ. ವ್ಯವಹಾರಕ್ಕೆ ಹಾಗೂ ವಿರಾಮವಾಗಿ ನಡೆಸುವ ಸಂಭಾಷಣೆ ಅವಧಿ ಬಹುತೇಕ ಒಂದೇ, ಅಂದರೆ ಅಂದಾಜು 2 ಗಂಟೆಯಾಗಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರು ಹೇಳಿದ್ದಾರೆ.
ಎಲ್ಲಿ ಸಮೀಕ್ಷೆ?: ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈ, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆ ನಗರಗಳ ಒಟ್ಟು 1,000 ಗ್ರಾಹಕರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
ಗಮನ ಭಂಗ: ಸ್ಮಾರ್ಟ್ಫೋನ್ನಿಂದಾಗಿ ತಮ್ಮ ಗಮನ ಆಗಾಗ ಬೇರೆಡೆ ಹೋಗುತ್ತದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡ 69ರಷ್ಟು ಮಂದಿ ಹೇಳಿದ್ದಾರೆ. ಇದಲ್ಲದೆ, ಜೀವನ ಸಂಗಾತಿಗೆ ಸಾಕಷ್ಟು ಗಮನ ಕೊಡಲಾಗುತ್ತಿಲ್ಲ ಎಂದೂ ಹೇಳಿದ್ದಾರೆ. ಜೀವನ ಸಂಗಾತಿಗಳು ಒಟ್ಟಿಗೆ ಸಮಯ ಕಳೆಯುತ್ತಿದ್ದಾಗ ಸ್ಮಾರ್ಟ್ಫೋನ್ ರಿಂಗಣದಿಂದಾಗಿ ಗಮನ ಭಂಗವಾಗುತ್ತದೆ ಎಂದವರು ಶೇಕಡ 68 ಮಂದಿ. ಬಿಡುವಿನ ಸಮಯವನ್ನು ಸ್ಮಾರ್ಟ್ಫೋನ್ ಜತೆ ಕಳೆಯುತ್ತಿದ್ದು, ತಮ್ಮ ವರ್ತನೆಯ ಭಾಗವಾಗಿರುವುದಾಗಿ ಶೇಕಡ 88 ಜನರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ. ಶೇಕಡ 90ರಷ್ಟು ಸಮೀಕ್ಷಿತರಿಗೆ ಸ್ಮಾರ್ಟ್ಫೋನೇ ವಿರಾಮವಾಗಿರಲು ಸಾಧನವಂತೆ!