Husband and Wife : ತನ್ನ ಪತ್ನಿಯ ಅತಿಯಾದ ಕುಡಿತದ ಚಟದಿಂದ ಬೇಸತ್ತ ಯುವಕನೊಬ್ಬ ಪೊಲೀಸರ ಸಹಾಯ ಕೋರಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಸ್ಥಳೀಯ ಪೊಲೀಸ್ ಠಾಣೆಯ ಕೌಟುಂಬಿಕ ಸಲಹಾ ಕೇಂದ್ರ ಸಮಾಲೋಚನೆ ನೀಡಿದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.
ಗೌಪ್ಯತೆ ದೃಷ್ಟಿಯಿಂದ ದಂಪತಿಯ ಗುರುತನ್ನು ಇಲ್ಲಿ ಬಹಿರಂಗಪಡಿಸಲಾಗಿಲ್ಲ. ದಂಪತಿ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದಾರೆ. ತನ್ನ ಹೆಂಡತಿಗಿರುವ ಚಟ ಮದುವೆಗೂ ಮೊದಲು ಗಂಡನಿಗೆ ಗೊತ್ತಿರಲಿಲ್ಲ. ಮದುವೆಯಾದ ಬಳಿಕ ಈ ವಿಚಾರ ಗಂಡನಿಗೆ ಗೊತ್ತಾದಾಗ ಆತ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು.
ಮದುವೆಯ ನಂತರವೂ ಪತ್ನಿ ತನ್ನ ಅಭ್ಯಾಸವನ್ನು ಮುಂದುವರೆಸಿದ್ದಾಳೆ. ಆದರೆ, ಗಂಡನಿಗೆ ಕುಡಿತದಲ್ಲಿ ಆಸಕ್ತಿ ಇಲ್ಲ. ಆದರೂ ಆಗಾಗ ತನಗೆ ಕಂಪನಿ ನೀಡುವಂತೆ ಪತ್ನಿ ಒತ್ತಡ ಹೇರುತ್ತಿದ್ದಳು. ಇದನ್ನು ಗಂಡನಿಗೆ ನಿಭಾಯಿಸಲು ಸಾಧ್ಯವಾಗದೇ ಕೊನೆಗೆ ಪತ್ನಿಯನ್ನು ಅವಳ ತವರು ಮನೆಗೆ ಕರೆದೊಯ್ದು ಬಿಟ್ಟುಬಂದನು.
ಪತಿ ತನ್ನನ್ನು ತೊರೆದಿದ್ದಾನೆ ಎಂದು ಪತ್ನಿ ಗಂಭೀರ ಆರೋಪ ಮಾಡಿದ್ದಾಳೆ. ಅಲ್ಲದೆ, ಪೊಲೀಸರಿಗೆ ದೂರು ಸಹ ನೀಡಿದ್ದಾಳೆ. ಹೀಗಾಗಿ ಪೊಲೀಸರು ಇಬ್ಬರಿಗೂ ಕೌನ್ಸೆಲಿಂಗ್ ವ್ಯವಸ್ಥೆ ಮಾಡಲು ಪೊಲೀಸರು ಮುಂದಾದರು.
ಇನ್ನು ಕೌನ್ಸೆಲಿಂಗ್ ಸಮಯದಲ್ಲಿ ತನ್ನ ಹೆಂಡತಿ ಪ್ರತಿದಿನ ಕುಡಿಯುತ್ತಾಳೆ ಮತ್ತು ಕಂಪನಿ ನೀಡುವಂತೆ ನನ್ನನ್ನು ಒತ್ತಾಯಿಸುತ್ತಾಳೆ ಎಂದು ಗಂಡ ತನ್ನ ಅಸಹಾಯಕತೆಯನ್ನು ಬಹಿರಂಗಪಡಿಸಿದ್ದಾನೆ. ಅಲ್ಲದೆ, ಒಂದೇ ಸಿಟ್ಟಿಂಗ್‌ನಲ್ಲಿ ಮೂರರಿಂದ ನಾಲ್ಕು ಪೆಗ್ಗಳನ್ನು ಕುಡಿಯುತ್ತಾಳೆ ಎಂದು ಆಕೆಯ ಗಂಡ ಹೇಳಿಕೊಂಡಿದ್ದಾನೆ.
ಕೌನ್ಸೆಲಿಂಗ್ ವೇಳೆ ಪತ್ನಿಯು ಸಹ ತನ್ನ ಕುಡಿತದ ಚಟವನ್ನು ಒಪ್ಪಿಕೊಂಡಿದ್ದಾಳೆ ಮತ್ತು ತನ್ನ ಗಂಡ ಹೇಳಿದ್ದು ಸರಿ ಎಂದಿದ್ದಾಳೆ. ಕೌನ್ಸೆಲಿಂಗ್ ಬಳಿಕ ಇಬ್ಬರು ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಲು ನಿರ್ಧರಿಸಿದ್ದು, ಮತ್ತೊಮ್ಮೆ ಒಟ್ಟಿಗೆ ವಾಸಿಸಲು ಒಪ್ಪಿಕೊಂಡಿದ್ದಾರೆ. (ಏಜೆನ್ಸೀಸ್)