ನ್ಯೂಸ್

ಕಾಶ್ಮೀರಿ ಪ್ರತ್ಯೇಕತಾ ನಾಯಕರಿಂದ ವೈದ್ಯಕೀಯ ಸೀಟ್ ಮಾರಾಟ ದಂಧೆ

ಶ್ರೀನಗರ: ಹುರಿಯತ್ ಕಾನ್ಪರೆನ್ಸ್ ಸಹಿತ ಅನೇಕ ಮುಖಂಡರು, ಉಗ್ರ ಸಂಟಗನೆಗಳ ಸದಸ್ಯರು ಜಮ್ಮು ಮತ್ತು ಕಾಶ್ಮೀರದ ಪ್ರಭಾವಿ ಕುಟುಂಬಗಳು, ಪೊಲೀಸರು ಮತ್ತು ರಾಜಕಾರಣಿಗಳ ಮಕ್ಕಳಿಗೆ ವೈದ್ಯಕೀಯ ಸೀಟ್ ಕೊಡಿಸುವ ದಂಧೆಯಲ್ಲಿ ತೊಡಗಿ ಹಣ ಸಂಪಾದನೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಹಿರಿಯ ನಾಯಕರ ನಡುವಿನ ಕಿತ್ತಾಟ ಈ ಹಗರಣ ಬಯಲಿಗೆ ಬರುವಂತೆ ಮಾಡಿದೆ.

ಭ್ರಷ್ಟಾಚಾರದಿಂದ ಬಯಲಿಗೆ: ಭ್ರಷ್ಟಾಚಾರದ ಕುರಿತು ಗುಲಾಂ ಮೊಹಮದ್ ಶಫಿ ಜೊತೆಗೆ ಹುರಿಯತ್​ನ ಪೋಷಕ ಮುಖಂಡ ಸೈಯದ್ ಅಲಿ ಷಾ ಗಿಲಾನಿ ಹೊಂದಿರುವ ಭಿನ್ನಮತ, ವೈದ್ಯಕೀಯ ಸೀಟ್ ಮಾರಾಟ ದಂಧೆ ಬೆಳಕಿಗೆ ಬರುವಂತೆ ಮಾಡಿದೆ. ಶಫಿಯ ನಾಲ್ವರು ಮಕ್ಕಳು ವೈದ್ಯರು ಅಥವಾ ಇಂಜಿನಿಯರ್ ಆಗಿದ್ದಾರೆ. ಒಬ್ಬ ಮಗಳು ಇಸ್ಲಾಮಾಬಾದ್​ನಲ್ಲಿ ಪತ್ರಕರ್ತೆಯಾಗಿದ್ದಾಳೆ.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ವೈದ್ಯಕೀಯ ಕಾಲೇಜ್​ಗಳಲ್ಲಿ ಪ್ರಭಾವಿಗಳು ಮಾತ್ರವಲ್ಲದೆ ತಮ್ಮ ಮಕ್ಕಳಿಗೂ ಸೀಟ್ ಕೊಡಿಸುವ ವ್ಯವಹಾರದಲ್ಲಿ ಪ್ರತ್ಯೇಕತಾ ಸಂಘಟನೆಗಳ ಕಾರ್ಯಕರ್ತರು ಹಾಗೂ ನಾಯಕರು ತೊಡಗಿದ್ದಾರೆ. ಕಾಶ್ಮೀರಿ ಮಕ್ಕಳ ಕೋಟಾ 2000ನೇ ಇಸವಿಯಲ್ಲಿ ಆರಂಭವಾದಾಗಿನಿಂದಲೂ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ರೈಲುಗಳ ಬಗ್ಗೆ ಸರ್ಕಾರಗಳು ಯಾವುದೇ ಗಮನ ಹರಿಸಿದ್ದುದು ಅಚ್ಚರಿಯ ಸಂಗತಿಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಸಂಘರ್ಷದಲ್ಲಿ ಮಡಿದ ಜನರ ಅನಾಥ ಮಕ್ಕಳಿಗಾಗಿ ಪಾಕ್ ಮತ್ತು ಪಿಒಕೆಯ ವೈದ್ಯ ಕಾಲೇಜ್​ಗಳಲ್ಲಿ ಸೀಟ್​ಗಳನ್ನು ಮೀಸಲಿರಿಸಲಾಗುತ್ತಿದೆ.

ಅನಾಥರ ಸೀಟು ಮಾರಾಟ: ಅನಾಥ ಮಕ್ಕಳಿಗಾಗಿ ಇರುವ ಸೀಟ್​ಗಳನ್ನು ಪ್ರತ್ಯೇಕತಾವಾದಿಗಳು ಹತ್ತರಿಂದ ಇಪ್ಪತ್ತು ಲಕ್ಷ ರೂಪಾಯಿ ಪಡೆದು ಹಣಬಲವುಳ್ಳವರಿಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಭಯೋತ್ಪಾದಕರು ಸೊಪೋರ್ ಮತ್ತು ಬಾರಾಮೂಲ ಹಾಗೂ ಉತ್ತರ ಕಾಶ್ಮೀರದ ಇತರ ಭಾಗಗಳ ವಿದ್ಯಾರ್ಥಿಗಳಿಗೆ ಉಗ್ರರು ಆದ್ಯತೆ ನೀಡುತ್ತಾರೆ ಎಂದು ಹುರಿಯತ್​ನ ಒಬ್ಬ ಕಾರ್ಯಕರ್ತನೇ ಬಾಯಿ ಬಿಟ್ಟಿದ್ದಾನೆ.

ಮೆಹಬೂಬಾ ಅಧಿಕಾರಿ ಫಲಾನುಭವಿ: ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯ ಭದ್ರತಾ ಪಡೆಯಲ್ಲಿದ್ದ ಒಬ್ಬ ಪೊಲೀಸ್ ಅಧಿಕಾರಿಯ ಮಗಳು ಕೂಡ ಈ ವ್ಯವಹಾರದ ಫಲಾನುಭವಿಯಾಗಿದ್ದಾಳೆ. ಒಬ್ಬ ನಿವೃತ್ತ ಡಿವೈಎಸ್​ಪಿ ಪುತ್ರಿ ಹಾಗೂ ನಿವೃತ್ತ ಜಿಲ್ಲಾಧಿಕಾರಿಯ ಮಗಳು ಕೂಡ ಹಣ ಕೊಟ್ಟು ಸೀಟು ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗಿದೆ.