ನ್ಯೂಸ್

ಸ್ವಲ್ಪದರಲ್ಲಿಯೇ ತಪ್ಪಿತು ಚೀನಾದ ಗುರಿ: ಇಲ್ಲದಿದ್ರೆ ನ್ಯೂಯಾರ್ಕ್ ಆಗುತ್ತಿತ್ತೇ ಭಸ್ಮ?

ನವದೆಹಲಿ: ಕರೊನಾ ವೈರಸ್​ನಿಂದ ಇಡೀ ವಿಶ್ವವೇ ನಲುಗಿ ಹೋಗಿದ್ದರೂ ಅಲ್ಲಲ್ಲಿ ದೇಶ ದೇಶಗಳ ನಡುವೆ ದ್ವೇಷದ ಭಾವವೇನೂ ಕಡಿಮೆ ಆಗುತ್ತಿಲ್ಲ. ಅತ್ತ ಅಮೆರಿಕದಲ್ಲಿ ಕರೊನಾ ರುದ್ರತಾಂಡವ ಆಡುತ್ತಿದ್ದರೆ, ಕರೊನಾದ ತವರು ಚೀನಾದಲ್ಲಿಯೂ ಪರಿಸ್ಥಿತಿಯೇನೂ ಸುಧಾರಿಸಿಲ್ಲ.

ಆದರೆ ಈ ಎರಡೂ ದೇಶಗಳು ಕರೊನಾ ವಿಷಯವನ್ನು ಬದಿಗಿಟ್ಟು ಪರಸ್ಪರ ಕಚ್ಚಾಟದಲ್ಲಿ ತೊಡಗಿಕೊಂಡಿವೆ. ಅಷ್ಟಕ್ಕೂ ಈ ಎರಡೂ ದೇಶಗಳ ನಡುವಿನ ಹಗ್ಗಜಗ್ಗಾಟ ಇಂದು ನಿನ್ನೆಯದ್ದಲ್ಲ. ಇದರ ಮುಂದುವರೆದಿರುವ ಭಾಗ ಎಂಬಂತೆ ಇದೀಗ ಚೀನಾ ಅಮೆರಿಕದ ಮೇಲೆ ಬಿಟ್ಟಿದೆ ಎನ್ನಲಾದ ಬರಹದಾಕಾರವಾದಂಥ ರಾಕೆಟ್​ ಅಟ್ಲಾಂಟಿಕ್ ಸಾಗರದ ಮೇಲೆ ಪತನಗೊಂಡಿದ್ದು, ಅದರ ಭಗ್ನಾವಶೇಷಗಳು ಸಿಕ್ಕಿವೆ. 15 ನಿಮಿಷ ರಾಕೆಟ್ ಹಾರಿದ್ದರೆ ಅದು ನೇರವಾಗಿ ನ್ಯೂಯಾರ್ಕ್​ ಸಿಟಿಯ ಮೇಲೆ ಬೀಳುತ್ತಿತ್ತು ಎನ್ನಲಾಗಿದೆ.

ಖಂಡದ ಪಶ್ಚಿಮ ಕರಾವಳಿಯಲ್ಲಿ ಅಟ್ಲಾಂಟಿಕ್ ಸಾಗರದ ಮೇಲೆ ಈ ಪ್ರದೇಶವನ್ನು ಗುರುತಿಸಲಾಗಿದೆ. ಅಲ್ಲಿನ ಹಳ್ಳಿಗಾಡಿನಲ್ಲಿ ಸ್ಥಳೀಯರಿಗೆ ಅನುಮಾನಸ್ಪದ ವಸ್ತು ದೊರಕಿರುವ ಬಗ್ಗೆಯೂ ಆಫ್ರಿಕಾ ಮಾಧ್ಯಮಗಳು ವರದಿ ಮಾಡಿದೆ.

ಇದು ನ್ಯೂಯಾರ್ಕ್​ ಸಿಟಿಯ ಮೇಲೆ ಬಿಟ್ಟಿರುವ ರಾಕೆಟ್​ ಎಂದು ಹೇಳಲಾಗುತ್ತಿದ್ದು. ಗುರಿ ಸರಿಯಾಗಿ ಹೋಗಿದ್ದೇ ಆದಲ್ಲಿ ಇಷ್ಟೊತ್ತಿಗೆ ನ್ಯೂಯಾರ್ಕ್ ಸಿಟಿ ಅರ್ಧ ಭಸ್ಮವಾಗುತ್ತಿತ್ತು ಎಂಬ ಮಾತುಗಳು ಕೇಳಿಬಂದಿವೆ.

ಚೀನಾ ಅಂತರಿಕ್ಷಕ್ಕೆ ರವಾನಿಸಿದ್ದ ಲಾಂಗ್ ಮಾರ್ಚ್ 5ಬಿ ಎಂಬ ರಾಕೆಟ್ ಇದಾಗಿದ್ದು, ಇದು ನಿಯಂತ್ರಣ ಕಳೆದುಕೊಂಡು ಮೇಲೆ ಹೋಗುವ ಬದಲು ಭೂಮಿಯ ಮೇಲೆ ಪತನಗೊಂಡಿದೆ. ಅಷ್ಟಕ್ಕು ಇದು ಕಳೆದ ಮೂವತ್ತು ವರ್ಷಗಳಲ್ಲಿಯೇ ಭೂಮಿಯ ಮೇಲೆ ಬಿದ್ದಿರುವ ಅತಿ ದೊಡ್ಡ ಬಾಹ್ಯಾಕಾಶ ಭಗ್ನಾವಶೇಷ ಎಂದು ತಜ್ಱರು ಹೇಳಿದ್ದಾರೆ.

ಇದರ ಗಾತ್ರ 100 ಅಡಿ ಉದ್ದ ಹಾಗೂ 16 ಅಡಿ ಅಗಲವಿದೆ. 20 ಟನ್‌ಗಿಂತಲೂ ಹೆಚ್ಚು ಭಾರವನ್ನು ಹೊಂದಿದೆ.

ಸಾಮಾನ್ಯವಾಗಿ ಇಷ್ಟು ದೊಡ್ಡ ಹಾಗೂ ಭಾರದ ವಸ್ತು ಭೂಮಿಯ ಮೇಲೆ ಬೀಳುವ ಸಾಧ್ಯತೆ ಕಡಿಮೆ. ರಾಕೆಟ್‌ ಭಗ್ನಾವಶೇಷಗಳು ವಾತಾವರಣದಲ್ಲೇ ಸುಟ್ಟು ಹೋಗಬೇಕಿತ್ತು. ಆದರೆ ಇದು ಅನಿರೀಕ್ಷಿತ ಎಂದು ತಜ್ಱರು ಬಣ್ಣಿಸಿದ್ದಾರೆ.

ಈ ರಾಕೆಟ್​ ಅನ್ನು ದಕ್ಷಿಣ ಚೀನಾದ ಹೈನಾನ್ ದ್ವೀಪದಲ್ಲಿನ ವೆನ್‌ಚಾಂಗ್ ಉಡಾವಣಾ ಕೇಂದ್ರದಿಂದ ಪರೀಕ್ಷಾರ್ಥವಾಗಿ ಉಡಾಯಿಸಲಾಗಿತ್ತು. ಇದು ಚೀನಾದ ಮುಂದಿನ ತಲೆಮಾರಿನ ಕ್ರ್ಯೂ ಕ್ಯಾಪ್ಸುಲ್ ಮೂಲ ಮಾದರಿಯನ್ನು ಕಕ್ಷೆಗೆ ಸಾಗಿಸಿತ್ತು. 2022ರಲ್ಲಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ರವಾನಿಸುವ ಸಾಮರ್ಥ್ಯವನ್ನು ಪರೀಕ್ಷಿಸಲು ಈ ಉಡಾವಣೆ ನಡೆಸಲಾಗಿತ್ತು.