ನ್ಯೂಸ್

ಹಸಿವು ತಡೆಯದೆ ಪ್ಲಾಸ್ಟಿಕ್​ ತ್ಯಾಜ್ಯ ಸೇವಿಸಿದ ಆನೆ: ಮಾನವನ ನಿರ್ಲಕ್ಷ್ಯಕ್ಕೆ ಬಲಿಯಾಗದಿರಲಿ ಮೂಕಪ್ರಾಣಿ

ನವದೆಹಲಿ: ಪ್ರವಾಸಿಗರು ಎಸೆದಂತಹ ಕಸದ ರಾಶಿಯಲ್ಲಿ ಹಸಿವಿನಿಂದ ಬಳಲುತ್ತಿದ್ದ ಆನೆಯೊಂದು ಆಹಾರ ಹುಡುಕುತ್ತಾ ಕೊನೆಗೆ ಪ್ಲಾಸ್ಟಿಕ್​ ತಿಂದಂತಹ ಘಟನೆ ಮನಕಲಕುವಂತಿದೆ.

ಪಶ್ಚಿಮ ಬಂಗಾಳದದಲ್ಲಿ ಈ ಹೃದಯ ಬಿರಿಯುವ ಘಟನೆ ವರದಿಯಾಗಿದೆ. ಪ್ರವಾಸಿಗರು ಬೀಸಾಡಿದ ತ್ಯಾಜ್ಯದ ರಾಶಿಯಲ್ಲಿ ಏನಾದರೂ ಸಿಗಬಹುದೆಂದು ಆಸೆಯಿಂದ ಹೋದ ಆನೆಗೆ ನಿರಾಸೆಯಾಗಿದ್ದಲ್ಲದೆ, ತನ್ನ ಹಸಿವು ನೀಗಿಸಿಕೊಳ್ಳಲು ಕೊನೆಗೆ ಪ್ಲಾಸ್ಟಿಕ್​ ತಿಂದಿದೆ.

ಸಾಮಾನ್ಯವಾಗಿ ಆನೆಗಳು ಬೇರು, ಹುಲ್ಲು, ಹಣ್ಣು ಮತ್ತು ತೊಗಟೆಗಳನ್ನು ತಿನ್ನುತ್ತವೆ. ಫೋಟೋ ಹಿಂಬದಿಯಲ್ಲಿ ಸಾಕಷ್ಟು ಹಸಿರುವ ಇರುವುದು ಕಂಡರೂ ಸಹ, ಈ ಆನೆಯು ಕಾಡಿನಲ್ಲಿ ಎಸೆಯಲ್ಪಟ್ಟ ಕೊಳೆತ ತ್ಯಾಜ್ಯದ ವಾಸನೆಗೆ ಹೆಚ್ಚು ಆಕರ್ಷಿತವಾದದ್ದು ವಿಚಿತ್ರ ಎನಿಸಿದೆ.

ಈ ಚಿತ್ರವನ್ನು ಪ್ರಣಾಬ್​ ದಾಸ್​ ಎಂಬುವವರು ಕ್ಲಿಕ್ಕಿಸಿದ್ದು, ಈ ರೀತಿ ಎಲ್ಲೆಂದರಲ್ಲಿ ಕಸವನ್ನು ಎಸೆಯದಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದು, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಸಾಕಷ್ಟು ವೈರಲ್​ ಆಗಿದ್ದು, ಅನೇಕ ನೆಟ್ಟಿಗರು ಪ್ರವಾಸಿಗರ ಕ್ರಮವನ್ನು ಖಂಡಿಸಿದ್ದಾರೆ. (ಏಜೆನ್ಸೀಸ್​)